ಕೊರೊನಾ ಎರಡನೇ ಅಲೆ ಇನ್ನೂ ಮುಗಿದಿಲ್ಲ, ನಿರ್ಲಕ್ಷ್ಯ ಬೇಡ: ವಿ.ಕೆ ಪೌಲ್

ನವದೆಹಲಿ, ಜು. 03: ದೇಶದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ. ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ 7 ರಾಜ್ಯಗಳಿಗೆ ಕೇಂದ್ರ ತಂಡಗಳನ್ನು ಕಳಿಸಿಕೊಡಲಾಗಿದೆ. ಇಡೀ ದೇಶ ಸುರಕ್ಷಿತ ಆಗುವವರೆಗೂ ನಾವು ಸುರಕ್ಷಿತ ಅಲ್ಲ ಎಂಬುದನ್ನು ಗಮನದಲ್ಲಿಡಬೇಕು. ಒಂದೆಡೆಯಿಂದ ಕೊರೊನಾ ಇನ್ನೊಂದೆಡೆಗೆ ಹರಡುತ್ತದೆ ಎಂದು ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್ ತಿಳಿಸಿದರು.

ಲಸಿಕೆ ಪಡೆದವರಿಗೆ ಕೊರೊನಾ ಸಾವಿನಿಂದ ರಕ್ಷಣೆ ಸಿಗುತ್ತದೆ ಎಂಬುದನ್ನು ಈ ಅಧ್ಯಯನವು ಸಾಬೀತುಪಡಿಸಿದೆ. ದೇಶಕ್ಕೆ 3ನೇ ಅಲೆ ಬಾಧಿಸುವುದು ಬೇಡ. ನಾವೆಲ್ಲವೂ ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಂಡರೆ 3ನೇ ಅಲೆಯನ್ನು ಖಂಡಿತ ತಡೆಯಬಹುದು. ನಮ್ಮ ದೇಶದಲ್ಲಿಯೂ ಮಾಡೆರ್ನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಲಸಿಕೆ ಉತ್ಪಾದಕರು ನೀಡಿದ ಭರವಸೆಯಂತೆ 216 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ. ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಕಂಪನಿಯು ಆಗಸ್ಟ್ ತಿಂಗಳಿಂದ ಡಿಸೆಂಬರ್​ವರೆಗೆ 5 ಕೋಟಿ ಡೋಸ್ ಪೂರೈಕೆ ಮಾಡಲಿದೆ. ಮೊದಲು 216 ಕೋಟಿ ಡೋಸ್ ಸಿಗುತ್ತೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದೆವು ಎಂದು ಮಾಧ್ಯಮಗೋಷ್ಠೀಯಲ್ಲಿ ವಿವರಿಸಿದರು.

ಜೂನ್ 21ರ ಬಳಿಕ ದೇಶದಲ್ಲಿ ಲಸಿಕೆ ನೀಡಿಕೆಗೆ ವೇಗ ಸಿಕ್ಕಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಮುಗಿದಿಲ್ಲ. ಹೀಗಾಗಿ ನಾವು ಎಚ್ಚರಿಕೆ ವಹಿಸುವುದರಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ಯುರೋಪ್​ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಗ್ಲೆಂಡ್ ಹಾಗೂ ರಷ್ಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ ಎಂದು ವಿವರಿಸಿದರು.

Exit mobile version