ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು?: ಸಿದ್ದರಾಮಯ್ಯ

ಬೆಂಗಳೂರು, ಮಾ. 19: ರಾಜ್ಯ ಸರ್ಕಾರ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ ಎಂದು ಆರೋಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊರೊನಾ ವೈರಸ್‌ಗೆ
ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು? ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ನಿಯಂತ್ರಣದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನಮ್ಮ ಆರೋಪಕ್ಕೆ ಸಾಕ್ಷಿ ಹೇಳುವಂತಿದೆ ಮತ್ತೆ ಅವತರಿಸಿ ಕೇಕೆ ಹಾಕುತ್ತಿರುವ ಕೊರೊನಾ ವೈರಸ್. ಮುಖ್ಯಮಂತ್ರಿ ಅವರೇ, ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ್ದರೆ ಮತ್ತೆ ಯಾಕೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಂಪನ್ಮೂಲ ವ್ಯಯಮಾಡಬೇಕಾಗಿದೆ ಎಂಬ ಕುಂಟುನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕಡಿತಗೊಳಿಸಿದ ಸಿಎಂ ಅವರು
ಈಗ ಏನು ಹೇಳುತ್ತಾರೆ?
ಅಷ್ಟೊಂದು ಆದ್ಯತೆ ನೀಡಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರಬೇಕಿತ್ತಲ್ಲಾ? ಯಾಕೆ ನಿಯಂತ್ರಣ ತಪ್ಪಿದೆ?.

ಕೊರೊನಾ ನಿರ್ವಹಣೆಗಾಗಿ ರೂ.5,372 ಕೋಟಿ ಖರ್ಚು ಮಾಡಲಾಗಿದೆ ಎಂದು ಮೊನ್ನೆ ಮಂಡಿಸಿದ್ದ ಬಜೆಟ್ ನಲ್ಲಿ ಹೇಳಿರುವ ಮುಖ್ಯಮಂತ್ರಿ, ಮಾಡಿರುವ ಖರ್ಚಿನ ವಿವರ ಮಾತ್ರ ತಿಳಿಸಿಲ್ಲ. ಈಗಲಾದರೂ ಆ ಹಣ ಯಾವ ಉದ್ದೇಶಗಳಿಗೆ ಖರ್ಚು ಮಾಡಿದ್ದೀರಿ ಎಂಬ ಲೆಕ್ಕದ ವಿವರವನ್ನು ಜನರ ಮುಂದಿಡಿ ಎಂದು ಆಗ್ರಹಿಸಿರುವ ಅವರು, ಕೊರೊನಾ ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ ದೋಷವನ್ನು ಎರಡನೇ ಅಲೆಯಲ್ಲಿಯಾದರೂ ತಿದ್ದಿಕೊಂಡು, ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ.

Exit mobile version