ನೆಹರೂ ಮೃಗಾಲಯದ 08 ಸಿಂಹಗಳಿಗೆ ಕೊರೋನಾ ಸೋಂಕು ತಗುಲಿದೆ

ಹೈದರಾಬಾದ್, ಮೇ. 04: ಹೈದರಾಬಾದ್‌ನಲ್ಲಿನ ನೆಹರೂ ಮೃಗಾಲಯದಲ್ಲಿನ ಎಂಟು ಸಿಂಹಗಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಭಾರತದಲ್ಲಿ ಇದೇ ಮೊದಲ ಬಾರಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ತಗುಲಿರುವ ವರದಿಯಾಗಿದೆ.

ಏಪ್ರಿಲ್ 29ರಂದು ಸಿಸಿಎಂಬಿ ಸಂಸ್ಥೆ ಮೃಗಾಲಯದಲ್ಲಿನ ಈ ಎಂಟು ಸಿಂಹಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ್ದು, ಎಲ್ಲಾ ಸಿಂಹಗಳಿಗೂ ಕೊರೊನಾ ಸೋಂಕು ಇರುವುದಾಗಿ ದೃಢಪಡಿಸಿದೆ.

ಈ ಕುರಿತು ಮೃಗಾಲಯದ ನಿರ್ದೇಶಕ ಡಾ. ಸಿದ್ಧಾನಂದ ಕುಕ್ರೇಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಿಂಹಗಳಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು. ಸಿಸಿಎಂಬಿಯಿಂದ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ವರದಿ ಕೈ ಸೇರುವ ಮುನ್ನ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಸದ್ಯಕ್ಕೆ ಸಿಂಹಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ಎಂಟು ಹುಲಿಗಳು ಹಾಗೂ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದ ವರದಿಯಾಗಿತ್ತು. ಹಾಂಗ್‌ಕಾಂಗ್‌ನಲ್ಲಿ ನಾಯಿ ಹಾಗೂ ಬೆಕ್ಕುಗಳಲ್ಲಿಯೂ ಕೊರೊನಾ ವೈರಸ್ ಪತ್ತೆಯಾಗಿತ್ತು. ಇದೀಗ ಭಾರತದಲ್ಲಿ ಮೊದಲ ಬಾರಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಕೊರೊನಾ ವೈರಸ್ ಮನುಷ್ಯರಿಂದ ಪ್ರಾಣಿಗಳಿಗೆ ತಗುಲಿದೆಯೇ ಎಂಬ ಕುರಿತು ಜೆನೋಮ್ ಪರೀಕ್ಷೆಯನ್ನು ಸಿಸಿಎಂಬಿ ನಡೆಸುತ್ತಿದೆ.

ಎರಡು ದಿನಗಳ ಹಿಂದೆ ನೆಹರೂ ಜೈವಿಕ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈಚೆಗಷ್ಟೆ ಉದ್ಯಾನದ 25 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.

Exit mobile version