ಕೋವಿಡ್​ ಆರ್ಭಟ: ಮೇ 15ರವರೆಗೆ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಆಸ್ಟ್ರೇಲಿಯಾ ಸರ್ಕಾರ

ನವದೆಹಲಿ, ಏ. 27: ದೇಶದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿದ್ದು, ಪ್ರತಿದಿನ ಲಕ್ಷಾಂತರ ಕೇಸ್ ಗಳು ಪತ್ತೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಅನೇಕ ದೇಶಗಳು ಭಾರತದ ವಿಮಾನಗಳಿಗೆ ನಿಷೇಧ ಹೇರಿವೆ. ಅಂತೆಯೇ ಆಸ್ಟ್ರೇಲಿಯಾ ಸರ್ಕಾರ ಕೂಡ ಸದ್ಯಕ್ಕೆ ಭಾರತೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿದ್ದು, ಈ ಕುರಿತಂತೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​​ ಮಾರಿಸನ್​​ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಭಾರತದಲ್ಲಿ ದಿನೇ ದಿನೇ ಕೊರೋನಾ ಕೇಸ್​ ಹೆಚ್ಚುತ್ತಿರುವ ಹಿನ್ನೆಲೆ, ಮೇ 15ರವರೆಗೆ ಭಾರತದ ವಿಮಾನಗಳಿಗೆ ನಿಷೇಧ ಹೇರಿ ಆಸ್ಟ್ರೇಲಿಯಾ ಸರ್ಕಾರ ಆದೇಶಿಸಿದೆ. ತಮ್ಮ ದೇಶಕ್ಕೆ ಕೊರೋನಾ ಹರಡುವ ಭೀತಿಯಿಂದ ಮುಂಜಾಗ್ರತೆಯಿಂದ ಈ ಕ್ರಮ ತೆಗೆದುಕೊಂಡಿದ್ದಾರೆ. ಕಳೆದ ವರ್ಷದಂತೆ ಪರಿಸ್ಥಿತಿ ಹದಗೆಡಬಾರದೆಂಬ ಉದ್ದೇಶದಿಂದ ಆಸ್ಟ್ರೇಲಿಯಾ ಪ್ರಧಾನಿ ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಭಾರತದಿಂದ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ನಾನು ಕಳೆದ ವಾರದ ಕೊನೆಯಲ್ಲಿ ಭಾರತದ ಪ್ರಧಾನಿಗೆ ಪತ್ರವೊಂದನ್ನು ಕಳುಹಿಸಿದ್ದೆ. ಅವರು ಪತ್ರವನ್ನು ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ‘ ಎಂದು ಪ್ರಧಾನಿ ಸ್ಕಾಟ್​ ಮಾರಿಸನ್ ಹೇಳಿದ್ದಾರೆ. ಭಾರತದ ವಿಮಾನಗಳನ್ನು ಸ್ಥಗಿತಗೊಳಿಸುವ ವಿಚಾರವಾಗಿ ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತಾ ಸಮಿತಿ ಇಂದು ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದೆ.

ಕೊರೋನಾ ನಿಯಂತ್ರಣಕ್ಕಾಗಿ ಆಸ್ಟ್ರೇಲಿಯಾವು ಕಳೆದ ಮಾರ್ಚ್​ ತಿಂಗಳಿನಿಂದ ಎಲ್ಲಾ ಗಡಿಗಳನ್ನು ಮುಚ್ಚಿದೆ. ಮರಳಿ ದೇಶಕ್ಕೆ ಬಂದಿರುವ ಪ್ರಯಾಣಿಕರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜೊತೆಗೆ ಎರಡು ವಾರಗಳ ಕಾಲ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿರಬೇಕು. ಚಿಕಿತ್ಸೆಯ ಖರ್ಚು-ವೆಚ್ಚ ಎಲ್ಲವೂ ನಿಮ್ಮದೇ ಎಂದು ಆಸ್ಟ್ರೇಲಿಯಾ ಸರ್ಕಾರ ದೇಶದ ಜನರಿಗೆ ಖಡಕ್ ಆದೇಶ ನೀಡಿದೆ.

Exit mobile version