ಅಕ್ಟೋಬರ್ ತಿಂಗಳಿನಲ್ಲಿ ಮಕ್ಕಳಿಗೂ ಕೊರೊನಾ ಲಸಿಕೆ – ಡಾ. ಕೆ. ಸುಧಾಕರ್

ಬೆಂಗಳೂರು ಅ 1 : ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಸುಧಾಕರ್‌ ತಿಳಿಸಿದ್ದಾರೆ

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಮಕ್ಕಳಲ್ಲಿ ಲಸಿಕೆ ಪ್ರಯೋಗ ಫೇಸ್ 3 ಟ್ರಯಲ್ ಕೊನೆಯ ಹಂತ ತಲುಪಿದೆ. ಕೊವಿಡ್ ತಡೆ ಮಾರ್ಗಸೂಚಿ ಅನ್ವಯ ಈಗಾಗಲೇ ಶಾಲೆ ಆರಂಭವಾಗಿದೆ. ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಘೋಷಣೆ ಮಾಡಬಹುದು ಎಂದರು

ಮಕ್ಕಳಲ್ಲಿ ಶೇಕಡಾ .008 ರಷ್ಟು ಮಾತ್ರ ಸೋಂಕು‌ ಕಂಡುಬಂದಿದೆ. ಶೇ.10ರಷ್ಟು ಮಕ್ಕಳಿಗೆ ಟೆಸ್ಟ್‌ ಮಾಡುವಂತೆ ಸೂಚಿಸಿದ್ದೇವೆ. ಶಾಲೆಗಳಲ್ಲಿ ಹೋದಾಗ, ಬೇರೆ ಸಂದರ್ಭದಲ್ಲಿ ಎಚ್ಚರ ಅಗತ್ಯ. ಕೋವಿಡ್ ಸೋಂಕು ಹೆಚ್ಚದಿರುವಂತೆ ತಡೆಯಲು ಬೇರೆ ಬೇರೆ ಇಲಾಖೆಗಳ ಮುಖಾಂತರ ಮಾರ್ಗಸೂಚಿ ಹೊರಡಿಸಬೇಕಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಥಿಯೇಟರ್‌ಗಳಲ್ಲಿ ಹೌಸ್‌ ಫುಲ್‌ಗೆ ಅವಕಾಶ ನೀಡಿದ್ದೇವೆ. ಇದನ್ನು ಹೊರತುಪಡಿಸಿದರೆ ಕೆಲವು ನಿರ್ಬಂಧಗಳಷ್ಟೇ ಇವೆ. ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ನೀಡುವವರೆಗೂ ಯಾವುದೇ ರೀತಿಯ ಸಮಾರಂಭ ಮಾಡಲು ಅವಕಾಶವಿಲ್ಲ. ಈಜುಕೊಳಕ್ಕೂ ಸದ್ಯಕ್ಕೆ ಅನುಮತಿಯನ್ನು ಕೊಡುವುದಿಲ್ಲ. ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಎರಡು ರಾಜ್ಯಗಳ ಗಡಿಯಲ್ಲಿ ಟೆಸ್ಟ್‌ ರಿಪೋರ್ಟ್‌ ಕಡ್ಡಾಯವಾಗಿದೆ ಎಂದು ಸಚಿವ ಡಾ.ಸುಧಾಕರ್‌ ಸ್ಪಷ್ಟಪಡಿಸಿದರು.

Exit mobile version