ಕ್ರಿಕೆಟ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರನಿಗೆ ಕೊರೊನಾ ಸೋಂಕು

ನವದೆಹಲಿ, ಜು. 15: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ತಂಡಕ್ಕೆ ಕೊರೊನಾ ಆತಂಕ ಶುರುವಾಗಿದ್ದು, ತಂಡದ 23 ಮಂದಿ ಸದಸ್ಯರ ಪೈಕಿ ಟೆಸ್ಟ್ ತಂಡದ ಓರ್ವ ಆಟಗಾರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ವಿಶ್ವ ಟೆಸ್ಟ್ ಚಾಂಪಿನಯನ್ಷಿಪ್ ಫೈನಲ್ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ 20 ದಿನಗಳ ಬ್ರೇಕ್ ದೊರೆತಿದ್ದು, ಈ ಸಮಯದಲ್ಲಿ ಟೆಸ್ಟ್ ತಂಡದ ಓರ್ವ ಆಟಗಾರನ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ. ಈ ಕಾರಣದಿಂದಾಗಿ ಮುಂದಿನ ತಿಂಗಳಿಂದ ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಡರ್‌ಹ್ಯಾಮ್‌ಗೆ ಭಾರತ ತಂಡದ ಜೊತೆಗೆ ಈ ಆಟಗಾರ ಪ್ರವಾಸ ಮಾಡುತ್ತಿಲ್ಲ. ಸದ್ಯ ಕೊರೊನಾ‌ ಸೋಂಕಿಗೆ ತುತ್ತಾಗಿರುವ ಈ ಆಟಗಾರನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಟೀಂ ಇಂಡಿಯಾ ಆಟಗಾರನಿಗೆ ಕೊರೊನಾ‌ ಸೋಂಕು ಕಾಣಿಸಿಕೊಂಡಿರುವ ಸಂಬಂಧ ಯುಕೆ ಅಲ್ಲಿರುವ ಭಾರತೀಯ ರಾಯಭಾರಿಗೆ ಪತ್ರ ಬರೆದಿರುವ ಜೇಯ್ ಶಾ, ಕೊರೊನಾ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಶೀಲ್ಡ್ ಲಸಿಕೆಯನ್ನಷ್ಟೇ ನೀಡಲಾಗಿದೆ. ಅಲ್ಲದೇ ತಂಡದ ಆಟಗಾರರು ಹೆಚ್ಚು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗದಂತೆ ಹಾಗೂ ವಿಂಬಲ್ಡನ್ ಅಥವಾ ಯೂರೋ ಕಪ್ ಫುಟ್ಬಾಲ್ ಪಂದ್ಯಗಳನ್ನ ವೀಕ್ಷಿಸಲು ತೆರಳದಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವೆ ಆಗಸ್ಟ್ 4ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟಿಗರು ಇಂದಿನಿಂದ ಆ.1ರ ತನಕ ಡರ್‌ಹ್ಯಾಮ್‌ ಕೌಂಟಿಯ “ಎಮಿರೇಟ್ಸ್‌ ರಿವರ್‌ಸೈಡ್‌ ಗ್ರೌಂಡ್‌’ನಲ್ಲಿ ಪ್ರಿ-ಟೆಸ್ಟ್‌ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಾಟಿಂಗ್‌ಹ್ಯಾಮ್‌ಗೆ ತೆರಳುವರು. ಇಲ್ಲಿನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಆ. 4ರಿಂದ ಮೊದಲ ಟೆಸ್ಟ್‌ ಆರಂಭವಾಗಲಿದೆ.

Exit mobile version