ಎಲ್ಲೆ ಮೀರಿದ ಕೊರೊನಾ ಎರಡನೇ ಅಲೆ: ಸಾರ್ವಜನಿಕರ ನೆರವಿಗಾಗಿ ಕರವೇ ಕಾರ್ಯಪಡೆ ರಚನೆ

ಬೆಂಗಳೂರು, ಏ. 27: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ಹೆಚ್ಚುತ್ತಿದ್ದು, ಜನರ ಆತಂಕ ದುಪ್ಪಟ್ಟಾಗುತ್ತಿದೆ. ಸೂಕ್ತ ಚಿಕಿತ್ಸೆ, ಆಕ್ಸಿಜನ್ ಸೌಲಭ್ಯಗಳು ದೊರಕದೆ ರೋಗಿಗಳು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ಕೈಜೋಡಿಸುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ವಿಶೇಷ ಕಾರ್ಯಪಡೆಯನ್ನು ರಚಿಸಲು ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಕೋವಿಡ್-19ರ ಎರಡನೇ ಅಲೆ ಎಲ್ಲರ ನಿರೀಕ್ಷೆಗಳನ್ನು ಮೀರಿ ನಮ್ಮೆಲ್ಲರನ್ನು ಕಾಡುತ್ತಿದೆ. ಇದು ಅತ್ಯಂತ ಅಪಾಯಕಾರಿ ಸನ್ನಿವೇಶ. ಜನರ ಜೀವಗಳ ರಕ್ಷಣೆ ನಮ್ಮೆಲ್ಲರ ಏಕೈಕ ಗುರಿಯಾಗಬೇಕು. ರೋಗಿಗಳು ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ಚಿಕಿತ್ಸೆ, ರಕ್ತ, ಪ್ಲಾಸ್ಲಾ, ಔಷಧಿ, ಆಪ್ತಸಲಹೆ ಇತ್ಯಾದಿ ಮೂಲಭೂತ ಅಗತ್ಯಗಳು ಸಿಗದೆ ನರಳುವಂತಾಗಬಾರದು. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಪಡೆಯನ್ನು ರಚಿಸಿದೆ.

ಆ ಮೂಲಕ ಇಡೀ ರಾಜ್ಯಾದ್ಯಂತ ಕರವೇ ಸೇನಾನಿಗಳ ತಂಡ ಸರ್ಕಾರ, ಆಸ್ಪತ್ರೆ, ವೈದ್ಯರು ಮತ್ತು ರೋಗಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಲಿದೆ. ಈ ಕೆಳಕಂಡ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿದರೆ, ರೋಗಿಗಳ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಬಗೆಯ ಪ್ರಯತ್ನಗಳನ್ನು ಮಾಡಲಾಗುವುದು.

ಪ್ರತಿ ಜೀವವೂ ಅಮೂಲ್ಯ. ನಮ್ಮೆಲ್ಲರ ಗುರಿ ಜೀವಗಳನ್ನು ಉಳಿಸಿಕೊಳ್ಳುವುದು. ಕರೋನಾ ವೈರಸ್ ನ ವಿಚಾರವಾಗಿ ಅಗತ್ಯವಿರುವ ಸಹಾಯಕ್ಕಾಗಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು ಸಹಾಯವಾಣಿ ಸಂಖ್ಯೆಗಳು: 9008946912, 8971225117 ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Exit mobile version