ಸಿದ್ದು ಭಾವಚಿತ್ರದ ಮೇಲೆ ಬರದ ಗೆರೆ : ರಾಜ್ಯ ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ಕೆಂಡಾಮಂಡಲ

Bengaluru : ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಭಾವಚಿತ್ರದಲ್ಲಿ ಬರದ ಚಿತ್ರವಿರುವ ರೀತಿಯಾಗಿ ಎಡಿಟ್ ಮಾಡಿರುವ ಪೋಟೋವನ್ನು ರಾಜ್ಯ ಬಿಜೆಪಿ (BJP) ಪೋಸ್ಟ್ ಮಾಡಿರುವುದಕ್ಕೆ ಸಚಿವ ದಿನೇಶ್ ಗುಂಡೂರಾವ್ (Dinesh GunduRao) ಕೆಂಡಾಮಂಡಲವಾಗಿದ್ದರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬರದ ಭಾವವಿರುವ ಪೋಟೋವನ್ನು ಪೋಸ್ಟ್ ಮಾಡಿ, ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಕಂಡು ಕೇಳರಿಯದ ಬರ ಆವರಿಸಿಕೊಂಡಿದೆ. ಸಿದ್ದರಾಮಯ್ಯ ಸಾಹೇಬರು ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ವಾರದಿಂದಲೇ ಮುಂಗಾರು ಕೈಕೊಟ್ಟು ಬರಗಾಲ ಸೃಷ್ಟಿಯಾಗಿತ್ತು. ಆದರೆ, ವರ್ಗಾವಣೆ ದಂಧೆ, ಕಮಿಷನ್ (Commission), ಕಲೆಕ್ಷನ್, ಶ್ಯಾಡೋ ಸಿಎಂ, ಸಚಿವರ ದರ್ಪದ ಮೇಲಾಟಗಳೇ ಹೆಚ್ಚಾದ ಹಿನ್ನೆಲೆ ಸರ್ಕಾರ ಈಗ ಧೃತರಾಷ್ಟ್ರನಂತೆ ವರ್ತಿಸುತ್ತಿದೆ.

ಪರಿಣಾಮ ರೈತರ ಸರಣಿ ಆತ್ಮಹತ್ಯೆ, ಕಲುಷಿತ ನೀರು ಪೂರೈಕೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಈ ಹಿಂದೆ ಬರಗಾಲವೇ ಇಲ್ಲವೆಂದು ಸಿದ್ದರಾಮಯ್ಯರವರ ಸರ್ಕಾರ ಮೈಮರೆತ ಕಾರಣ ಇಂದು 195 ತಾಲೂಕುಗಳಲ್ಲಿ ಬರ ಬಂದಿದೆ. ಈಗಲೂ ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಾಗದೆ ಕೈಲಾಗದವರಂತೆ ಕೂತಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ದಿನೇಶ್ ಗುಂಡೂರಾವ್ (Dinesh GunduRao) , ಪರಿಸರ ನಾಶ, ಜಾಗತಿಕ ತಾಪಮಾನ, ಎಲ್ನಿನೋ ಎಫೆಕ್ಟ್ನಿಂದಾಗಿ ಬದಲಾಗುತ್ತಿರುವ ಋತುಮಾನದ ಬದಲಾವಣೆ ಮಳೆ ಕೊರತೆಗೆ ಕಾರಣ. ಇದು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಶಾಲಾ ಮಕ್ಕಳಿಗೂ ಗೊತ್ತಿದೆ. ಆದರೆ BJPಯವರು ಮಳೆ ಕೊರತೆಗೆ ಕಾಂಗ್ರೆಸ್ ಕಾರಣ ಎಂದು ಅಜ್ಞಾನ ಪ್ರದರ್ಶಿಸುತ್ತಿದ್ದಾರೆ.

ಇಂತಹ ಮೂಢರು BJPಯಲ್ಲಿ ಮಾತ್ರ ಇರಲು ಸಾಧ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬರುವುದಿಲ್ಲ ಎಂಬ ಮೌಢ್ಯವನ್ನು BJP ಬಿತ್ತುತ್ತಿದೆ. ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲೂ ಮಳೆಯಿಲ್ಲ. ಈ ಬಾರಿ ಕೇರಳದ (Kerala) ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 14 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ. ಅಲ್ಲಿ ಕಾಂಗ್ರೆಸ್ (Congress) ಸರ್ಕಾರವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇನ್ನು ರಾಜ್ಯದ 14 ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ. 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿ ರಾಜ್ಯ ಕಾಂಗ್ರೆಸನ್ನು ಟೀಕಿಸಿದೆ.

Exit mobile version