ಜೆಡಿಎಸ್ ಆಯಸ್ಸು ಮುಗಿದಿದೆ ಎಂದು ಟೀಕಿಸಿದ ಡಿ.ಕೆ.ಶಿವಕುಮಾರ್

Mysuru: ಈಗಾಗಲೇ ದೆಹಲಿಯಲ್ಲಿ (Delhi) ಎಲ್ಲವೂ ತೀರ್ಮಾನವಾಗಿದೆ. ಸ್ವಲ್ಪ ದಿನ ಕಾಯಿರಿ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ನನ್ನ ಕೈ ಬಲ ಪಡಿಸಲು ಸಹಕರಿಸಿ ನಿಮಗೆ ಉತ್ತಮ ಸೌಲಭ್ಯ ಒದಗಿಸುವ ಗುರಿ ನನ್ನದು ಎಂದು ಮೈಸೂರು ನಗರದಲ್ಲಿ ನಡೆದ ಮೈಸೂರು-ಕೊಡಗು ಜಿಲ್ಲೆಯ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಉಪ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ಹೇಳಿದ್ದಾರೆ. ಮೈಸೂರಿನಲ್ಲಿ ಒಕ್ಕಲಿಗರ ಬೆಳವಣಿಗೆಗೆ ಸ್ಪಲ್ಪ ಸಮಸ್ಯೆಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇನ್ನು ಜೆಡಿಎಸ್‌ನ (JDS) ಆಯುಷ್ಯ ಮುಗಿದಿದೆ. ಬಿಜೆಪಿಯಲ್ಲಿ (BJP) ಒಕ್ಕಲಿಗರ ನಾಯಕತ್ವ ಬೆಳೆಯಲು ಅವಕಾಶವಿಲ್ಲ. ಹಾಗಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಮೈಸೂರು-ಕೊಡಗು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಇತರೆಡೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ. ನಿತ್ಯ ಕುಮಾರಸ್ವಾಮಿ ನನ್ನ ಬಗ್ಗೆ, ಚೆಲುವರಾಯಸ್ವಾಮಿ (Cheluvarayaswamy), ಕೆ.ವೆಂಕಟೇಶ್ ಸೇರಿದಂತೆ ಇತರೆ ಸಾಮಾನ್ಯ ಒಕ್ಕಲಿಗ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂತಹ ಚುಚ್ಚು ಮಾತುಗಳನ್ನು ಎಷ್ಟು ದಿನ ಸಹಿಸಿಕೊಳ್ಳುವುದು ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ನಡೆಸಿರುವ ಸರ್ವೆ ಪ್ರಕಾರ ಹಾಸನ, ಮಂಡ್ಯದಲ್ಲಿ (Hassan, Mandya) ಜೆಡಿಎಸ್ ಅಭ್ಯರ್ಥಿಗಳು ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಮಹಿಳೆಯರಿಗೆ ನೀಡಿರುವ ಯೋಜನೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಹಾಗಾಗಿ ಜನರು ಅವರನ್ನು ಮತ್ತೆ ಗೆಲ್ಲಿಸುವುದಿಲ್ಲ.

ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Loksabha Election) ಎಂಟು ಒಕ್ಕಲಿಗ ಅಭ್ಯರ್ಥಿಗಳಿಗೆ ಅವಕಾಶ ಮಾಡಿ ಕೊಟ್ಟಿದೆ.ಮಹಿಳೆಯರಿಗೆ ಸ್ಥಾನ ನೀಡಿದೆ.ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದೆ.ಹಾಗಾಗಿ ಈ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ನನ್ನ ನಾಯಕತ್ವಕ್ಕೆ ಈ ಭಾಗದ ಒಕ್ಕಲಿಗರು ಮತ್ತಷ್ಟು ಶಕ್ತಿ ತುಂಬಬೇಕು, ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.

Exit mobile version