ಉಚಿತ ಕೊಡುಗೆಗಳನ್ನು ನೀಡದಂತೆ ರಾಜ್ಯಗಳಿಗೆ ಆರ್ಥಿಕ ತಜ್ಞರ ಎಚ್ಚರಿಕೆ!

Crisis

ರಾಜ್ಯ ಸರ್ಕಾರಗಳು ಉಚಿತ ಯೋಜನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಕೆಲವೇ ವರ್ಷಗಳಲ್ಲಿ ದಿವಾಳಿ ಸ್ಥಿತಿ ತಲುಪಲಿದೆ ಎಂದು ಆರ್ಥಿಕ ತಜ್ಞರು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.


ಎಸ್‍ಬಿಐ(SBI) ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ಸಮಿತಿಯೊಂದು ಈ ಕುರಿತು ಅಧ್ಯಯನ ನಡೆಸಿದ್ದು, ಮುಂಬರುವ ಜೂನ್ ತಿಂಗಳಿಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ(Central Government) ನೀಡುತ್ತಿರುವ ಜಿಎಸ್‍ಟಿ(GST) ಪರಿಹಾರ ಕೊನೆಗೊಳ್ಳಲಿದೆ. ಹೀಗಾಗಿ ರಾಜ್ಯಗಳು ತಮ್ಮ ಪಾಲಿನ ಆದಾಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಸಬ್ಸಿಡಿ ಮತ್ತು ಉಚಿತ ಯೋಜನೆಗಳು ಜಾರಿಯಲ್ಲಿವೆ.

ಕೆಲವು ರಾಜ್ಯಗಳು ವಿಪರೀತ ಎನ್ನಿಸುವಷ್ಟು ಉಚಿತ ಯೋಜನೆಗಳನ್ನು ಘೋಷಣೆ ಮಾಡಿವೆ ಎಂದಿದೆ. ಇನ್ನು ತೆಲಂಗಾಣ ರಾಜ್ಯವೂ ತನ್ನ ಒಟ್ಟು ಆದಾಯದ ಶೇಕಡಾ 35ರಷ್ಟು ಹಣವನ್ನು ಜನಪ್ರಿಯ ಮತ್ತು ಉಚಿತ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ಅದೇ ರೀತಿ ರಾಜಸ್ಥಾನ, ಛತ್ತೀಸ್‍ಘಡ್, ಆಂದ್ರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಶೇಕಡಾ 5 ರಿಂದ 19ರಷ್ಟು ತಮ್ಮ ಆದಾಯವನ್ನು ಜನಪ್ರಿಯ ಯೋಜನೆಗಳಿಗಾಗಿ ಖರ್ಚು ಮಾಡುತ್ತಿದೆ. ಸದ್ಯ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಜಿಎಸ್‍ಟಿ ಪಾಲು ರಾಜ್ಯಗಳ ಒಟ್ಟು ಆದಾಯದ 5ನೇ ಒಂದರಷ್ಟು ಮಾತ್ರ.

ಹೀಗಾಗಿ ರಾಜ್ಯಗಳು ತಮ್ಮ ಆದಾಯಕ್ಕೆ ತಕ್ಕಂತೆ ಯೋಜನೆಗಳನ್ನು ಯೋಜಿಸಬೇಕು. ಇನ್ನು ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾಗಲೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. ಉಚಿತ ಯೋಜನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ರಾಜ್ಯಗಳು ಶ್ರೀಲಂಕಾ ರೀತಿಯಲ್ಲಿ ದಿವಾಳಿಯಾಗುತ್ತವೆ. ಈ ಕುರಿತು ಗಂಭೀರ ಚಿಂತನೆಯನ್ನು ರಾಜ್ಯಗಳು ನಡೆಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

Exit mobile version