ಕೇಜ್ರಿವಾಲ್‌ ಅವರನ್ನು ನ. 2 ರಂದು ಇ.ಡಿಯಿಂದ ಬಂಧನ ಮಾಡುವ ಸಾಧ್ಯತೆ: ಸಚಿವೆ ಅತಿಶಿ ಆತಂಕ

New Delhi: ದಿಲ್ಲಿ (Delhi ) ಸಿಎಂಹಾಗೂ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಲಿಕ್ಕರ್‌ ಹಗರಣ ಸಂಬಂಧ ನ 2ರಂದು ವಿಚಾರಣೆಗೆ ಒಳಪಡಿಸುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಬಳಿಕ ಬಂಧಿಸಿ ಕರೆದೊಯ್ಯುವ ಸಾಧ್ಯತೆ ಹೆಚ್ಚಿದೆ ಎಂದು ದಿಲ್ಲಿ ಸಚಿವೆ ಅತಿಶಿ ಸಿಂಗ್ ಮರ್ಲೇನಾ (Atishi Singh Marlena) ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯು (BJP) ಆಪ್‌ ಪಕ್ಷವನ್ನು ನಿರ್ನಾಮ ಮಾಡಲು ಕುತಂತ್ರ ರೂಪಿಸಿದ್ದು, ಪಕ್ಷದ ಹಿರಿಯ ನಾಯಕರ ಮೇಲೆ ವಿನಾಕಾರಣ ಆರೋಪಗಳನ್ನು ಮಾಡಿ ಜೈಲಿಗೆ ಅಟ್ಟಲಾಗುತ್ತಿದೆ. ಆಪ್‌ ಕಾರ್ಯಕರ್ತರಲ್ಲಿ ಭಯ ಬಿತ್ತುವುದು ಕಮಲ ಪಾಳಯದ ಉದ್ದೇಶವಾಗಿದೆ. ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಪಕ್ಷವನ್ನು ಸೋಲಿಸಲಾಗದೆಯೇ ಮುಖಭಂಗ ಉಂಟಾಗಿದ್ದಕ್ಕೆ ಬಿಜೆಪಿ ನಾಯಕರು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಸಚಿವೆ ಗಂಭೀರ ಆರೋಪ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ನವೆಂಬರ್ (November) 2ರಂದು ಬಂಧಿಸಲಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಅವರನ್ನು ಬಂಧಿಸಿದರೆ, ಅದು ಭ್ರಷ್ಟಾಚಾರ ಆರೋಪಗಳ ಕಾರಣಕ್ಕೆ ಅಲ್ಲ, ಆದರೆ ಅವರು ಬಿಜೆಪಿ ವಿರುದ್ಧ ಮಾತನಾಡುವ ಕಾರಣಕ್ಕೆ” ಎಂದು ಕಿಡಿಕಾರಿದ್ದಾರೆ.

ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿ ನಮ್ಮ ವಿರುದ್ಧ ಸೋತಿದ್ದು, ಪಾಲಿಕೆ ಚುನಾವಣೆಯಲ್ಲಿ ಕೂಡ ಮುಖಭಂಗ ಅನುಭವಿಸಿದೆ. ಹಾಗಾಗಿ ಎಎಪಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್‌ ಕಂಡರೆ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಭಯ ಇದೆ. ಎಎಪಿಯನ್ನು ಚುನಾವಣೆಯಲ್ಲಿ ಸೋಲಿಸುವುದು ತನಗೆ ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ತಿಳಿದಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಕಳೆದ ಸೋಮವಾರ ಇಡಿ ಸಮನ್ಸ್‌ (ED Summons) ಜಾರಿ ಮಾಡಿತ್ತು. ಕೇಜ್ರಿವಾಲ್‌ ವಿರುದ್ಧ ಲಿಕ್ಕರ್‌ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿರುವ ಆರೋಪವನ್ನು ಅಧಿಕಾರಿಗಳು ಮಾಡಿದ್ದು, ಕಳೆದ ಏಪ್ರಿಲ್‌ನಲ್ಲಿ (April) ಇದೇ ಪ್ರಕರಣ ಸಂಬಂಧ ಸಿಬಿಐ (CBI) ಅಧಿಕಾರಿಗಳು ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿರುವುದು ಇದು ಮೊದಲ ಸಲವಾಗಿದೆ.

ಭವ್ಯಶ್ರೀ ಆರ್.ಜೆ

Exit mobile version