ಕೊರೋನಾ ತಡೆಗಟ್ಟಲು ಕಹಿಬೇವಿನ ಎಲೆ ಪರಿಣಾಮಕಾರಿ: ಅಧ್ಯಯನ ವರದಿ

ನವದೆಹಲಿ, ಮೇ. 15: ಕೊರೊನಾ ತಡೆಗಟ್ಟಲು ನೀಮ್ ಕ್ಯಾಪ್ಸೂಲ್ (ಕಹಿಬೇವು ಕ್ಯಾಪ್ಸೂಲ್) ಪರಿಣಾಮಕಾರಿ ಎಂದು ಫರಿದಾಬಾದ್​ನ ಇಎಸ್​ಐಸಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಮತ್ತು ನಿಸರ್ಗ ಬಯೋಟೆಕ್ ಲಿಮಿಟೆಡ್ ಕಂಪೆನಿಗಳು ಇಂದು ತಿಳಿಸಿವೆ. ಈ ಬಗ್ಗೆ ಅಧ್ಯಯನ ನಡೆಸಿರುವ ಫಲಿತಾಂಶ, ದಾಖಲೆಗಳನ್ನು ಕೂಡ ಅವು ಬಹಿರಂಗಪಡಿಸಿವೆ. ಕಹಿಬೇವಿನ (Azadirachta Indica A. Juss) ಎಲೆಯ ಅಂಶದಿಂದ ಕೊರೊನಾ ತಡೆಗಟ್ಟಬಹುದು ಎಂದು ತಿಳಿದುಬಂದಿದೆ. ಈ ಅಧ್ಯಯನವನ್ನು ಫರಿದಾಬಾದ್​ನ ಇಎಸ್​ಐಸಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಮತ್ತು ನವ ದೆಹಲಿಯ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA) ಜಂಟಿಯಾಗಿ ನಡೆಸಿದ್ದು, ನಿಸರ್ಗ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸತಾರ ಪ್ರಾಯೋಜಿಸಿದೆ.

ಈ ಅಧ್ಯಯನವನ್ನು ಫರಿದಾಬಾದ್​ನ ಇಎಸ್​ಐಸಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 18ರಿಂದ 60 ವರ್ಷದೊಳಗಿನ 190 ಮಂದಿಯ ಮೇಲೆ ನಡೆಸಲಾಗಿದೆ. ಆಗಸ್ಟ್​ನಿಂದ ಡಿಸೆಂಬರ್ 2020ರ ಅವಧಿಯಲ್ಲಿ ಪ್ರೊ. ತನುಜಾ ನೇಸರಿ (MD, PhD), ಎಐಐಎ ನಿರ್ದೇಶಕರು ಹಾಗೂ ಡಾ. ಎ.ಕೆ. ಪಾಂಡೆ ಇಎಸ್​ಐಸಿ ಆಸ್ಪತ್ರೆ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಅಧ್ಯಯನವನ್ನು ಸಿಟಿಆರ್​ಐ (Institutional Ethics Committee and registered at Clinical Trial Registry of India) ಸಂಸ್ಥೆ ಅನುಮೋದಿಸಿದೆ.

50 ಎಮ್​ಜಿ ನೀಮ್ ಕ್ಯಾಪ್ಸೂಲ್​ನ್ನು 28 ದಿನಗಳ ಕಾಲ ದಿನಕ್ಕೆ ಎರಡು ಬಾರಿ ಸೇವಿಸುವವರಿಗೆ ಕೊವಿಡ್-19 ಸೋಂಕು ತಗುಲುವ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ನೀಮ್ ಕ್ಯಾಪ್ಸೂಲ್ ಪರಿಣಾಮದ ಬಗ್ಗೆ ಡಾ. ಅನಿಲ್ ಕುಮಾರ್ ಪಾಂಡೆ ಮಾತನಾಡಿದ್ದಾರೆ. ಆಯುರ್ವೇದ ಔಷಧ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿ ತುಂಬುವ ಸಾಮರ್ಥ್ಯವಿದೆ. ಈ ಅಧ್ಯಯನ ವರದಿಯು ರೋಗನಿರೋಧಕ ಶಕ್ತಿ ಸಾಮರ್ಥ್ಯ ಹೆಚ್ಚಳದ ವಿಚಾರದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಕೊರೊನಾ ಸೋಂಕಿಗೆ ನಿಗದಿತ ಚಿಕಿತ್ಸೆ ಇಲ್ಲದ ಸಮಯದಲ್ಲಂತೂ ಇದು ಬಹುಮುಖ್ಯ ಅಧ್ಯಯನ ಎಂದು ಹೇಳಿದ್ದಾರೆ.

Exit mobile version