ಡೋಲೋ 650 ಪ್ಯಾರಾಸಿಟಮಾಲ್ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ನೋಡಿ.!

2020 ರಲ್ಲಿ ಕೊರೊನಾ ಸೊಂಕು ಶುರುವಾಗಿನಿಂದ ಅತ್ಯಂತ ಜನಮನದಲ್ಲಿರುವುದು ಡೋಲೊ-650 ಎಂಬ ಮಾತ್ರೆ. ಜ್ವರ, ಮೈಕೈ ನೋವು, ತಲೆನೋವು ಎಲ್ಲದಕ್ಕೂ ರಾಮಬಾಣವಾಗಿದ್ದು, ಎಲ್ಲರ ಕೈಗೂ ಸಹ ಸುಲಭ ದರದಲ್ಲಿ ವೈದ್ಯರ ಚೀಟಿಯ ಅಗತ್ಯವಿಲ್ಲದೇ ದೊರಕುವ ಮಾತ್ರೆಗಳಲ್ಲಿ ಈ ಡೋಲೊ-650. ಅಷ್ಟಕ್ಕೂ ಈ ಡೊಲೊ-650 ಮಾತ್ರೆಯಲ್ಲಿರುವುದು ಪ್ಯಾರಾಸಿಟಮಾಲ್ ಅಥವಾ ಅಸಿಟೋಮೆನಫೆನ್ ಎಂಬ ಔಷಧಿ. ಈ ಔಷಧಿ ಪ್ರತಿ ಮಾತ್ರೆಯಲ್ಲಿ 650 ಮಿಲಿಗ್ರಾಮ್ ಪ್ರಮಾಣದಲ್ಲಿರುತ್ತದೆ.

ಬ್ಯುಸಿನೆಸ್ ಟುಡೇ ಪತ್ರಿಕೆಯ ವರದಿಯ ಪ್ರಕಾರ ಡೊಲೊ-650 ಮಾತ್ರೆಗಳು ಇಲ್ಲಿಯವರೆಗೂ 350 ಕೋಟಿಯಷ್ಟು ಮಾರಾಟವಾಗಿವೆಯಂತೆ. ಪ್ರತಿ ಮಾತ್ರೆಗೆ ಸರಾಸರಿ 2 ರೂ ಅಂದರೂ ಸಹ ರೂ 700 ಕೋಟಿ ರೂಪಾಯಿಗಳ ವ್ಯಾಪಾರವಾಗಿದೆ ಮತ್ತು ಸರಿ ಸುಮಾರು 250 ಟನ್ನಿನಷ್ಟು ಪ್ಯಾರಾಸಿಟಮಾಲ್ ಮನುಜರ ಹೊಟ್ಟೆ ಸೇರಿದೆ !. ಇನ್ನು ಇತರ ಪ್ಯಾರಾಸಿಟಮಾಲ್ ಆವೃತ್ತಿಗಳಾದ ಕ್ಯಾಲ್ಪೋಲ್, ಡೋಲೋಪಾರ್, ವಿಕ್ಸ್ ಆಕ್ಷನ್ 500 ಇತ್ಯಾದಿ ಅನೇಕ ಸಹಸ್ರ ಮಾತ್ರೆಗಳಲ್ಲಿ ಒಂದಲ್ಲಾ ಒಂದು ಪ್ರಮಾಣದಲ್ಲಿ ಪ್ಯಾರಾಸಿಟಮಾಲ್ ಇದ್ದೇ ಇದೆ. ಜ್ವರ, ಥಂಡಿ, ತಲೆನೋವು, ಹೊಟ್ಟೆನೋವು, ಮೈಕೈ ನೋವು, ಮುಟ್ಟಿನ ನೋವು, ಹಲ್ಲು ನೋವು, ಕಾಲು ಗಂಟುನೋವು ಇದಕ್ಕೆಲ್ಲಾ ಇದು ರಾಮಬಾಣ.

  1. ಅಷ್ಟಕ್ಕೂ ಏನಿದು ಪ್ಯಾರಾಸೆಟಮಾಲ್ :

ಇದನ್ನು ಅಸೆಟಮೆನೊಫೆನ್ ಎಂತಲೂ ಕರೆಯಲ್ಪಡುತ್ತದೆ. 1894 ಹಿನ್ಸ್ಬರ್ಗ್ ಮತ್ತು ಟ್ರೆಪಲ್ ಎಂಬಿಬ್ಬ ವಿಜ್ಞಾನಿಗಳು ಇದನ್ನು ವೈದ್ಯ ಲೋಕಕ್ಕೆ ಪರಿಚಯಿಸಿದರು. ಇವರು ಇದರ ಜ್ವರ ನಿವಾರಕ ಗುಣ ಮತ್ತು ವಿಷಬಾಧೆಯನ್ನು ಕಪ್ಪೆಗಳು, ಇಲಿ,ಮೊಲ ಮತ್ತು ನಾಯಿಗಳ ಮೇಲೆ ಪ್ರಯೋಗದ ಮೂಲಕ ಕಂಡು ಹಿಡಿದರು. ಆದರೆ 1949 ರವರೆಗೂ ಸಹ ಇದು ಯಾರ ಗಮನವನ್ನು ಸೆಳೆಯಲೇ ಇಲ್ಲ. ಲಂಡನ್ನಿನ ಸೇಂಟ್ ಮೇರಿಸ್ ಆಸ್ಪತ್ರೆಯ ಸ್ಮಿಥ್ ಮತ್ತು ವಿಲ್ಲಿಯಮ್ಸ್ ಎಂಬ ಇಬ್ಬರು ವಿಜ್ಞಾನಿಗಳು ಈಗಾಗಲೇ ಅನೇಕ ವರ್ಷಗಳಿಂದ ಜ್ವರ ನಿವಾರಕವಾಗಿ ಚಾಲ್ತಿಯಲ್ಲಿದ್ದ ಅಸಿಟಾನಿಲೈಡ್ ಮತ್ತು ಫೆನಾಸಿಟಿನ್ ಎಂಬ ಔಷಧಿಗಳ ಉಪ ಉತ್ಪನ್ನ ಮತ್ತು ಇದರ ಅತ್ಯುತ್ತಮ ಜ್ವರ ನಿವಾರಕ ಗುಣವನ್ನು 12 ಸಾಮಾನ್ಯ ಮಹಿಳೆಯರ ಮೇಲೆ ಪ್ರಯೋಗಿಸಿ ಪತ್ತೆ ಮಾಡಿದರು.

1950 ರಷ್ಟರೊತ್ತಿಗೆ ಇದು ಅನೇಕ ಕಂಪನಿಗಳ ಗಮನ ಸೆಳೆದು ಅಸ್ಪಿರಿನ್ ಮತ್ತು ಕೆಫಿನ್ (ಚಹಾ ಮತ್ತು ಕಾಫಿಯಲ್ಲಿರುವ ಅಂಶ) ಜೊತೆ ಇದನ್ನು ಮಿಶ್ರಣ ಮಾಡಿ ಗುಳಿಗೆ ರೂಪದಲ್ಲಿ ಅಮೇರಿಕಾದಲ್ಲಿ ಮಾರಲು ಪ್ರಾರಂಭಿಸಿದವು. ಆದರೆ 1951 ರ ಅಂತ್ಯದಲ್ಲಿಯೇ ಇದು ರಕ್ತವನ್ನು ತೆಳು ಮಾಡಿ ರಕ್ತ ಸ್ರಾವ ಜಾಸ್ತಿ ಮಾಡುತ್ತದೆಂದು ಮಾರುಕಟ್ಟೆಯಿಂದ ಹಿಂಪಡೆಯಲ್ಪಟ್ಟರೂ ಸಹ ಪ್ಯಾರಾಸಿಟಮಾಲ್ ಮಾತ್ರ ಒಂದೇ ಔಷಧಿಯೆಂದು ಮಾರಲು 1955 ರಲ್ಲಿ ಅನುಮತಿ ದೊರಕಿತು. 1956 ರಲ್ಲಿ ಆಸ್ಟ್ರೇಲಿಯಾ ಮತ್ತು ಇತರ ಅನೇಕ ದೇಶದಲ್ಲಿ ಇದು ಮಹತ್ವದ ಜ್ವರ ನಿವಾರಕವಾಗಿ ಮಾರಲ್ಪಟ್ಟಿದ್ದು ಈಗ ಇತಿಹಾಸ. ನಂತರ ಇದರ ಮೇಲೆ ಸಹಸ್ರಾರು ಸಂಶೋಧನೆಗಳು ನಡೆದು ಇದು ರಾಸಾಯನಿಕವಾಗಿ ಸ್ಟಿರಾಯ್ಡ್ ಅಲ್ಲದ ನೋವು ನಿವಾರಕಗಳ ಗುಂಪಲ್ಲಿ ಸೇರಲ್ಪಟ್ಟಿತು. ಸಾಮಾನ್ಯವಾಗಿ ಈ ಗುಂಪಿಗೆ ಸೇರಿದ ನೋವುನಿವಾರಕಗಳು ಮತ್ತು ಜ್ವರ ನಿವಾರಕಗಳು ಹೊಟ್ಟೆಯಲ್ಲಿ ಅಲ್ಸರ್ ಮಾಡುವ ಅಡ್ಡ ಪರಿಣಾಮ ಹೊಂದಿದ್ದರೂ ಸಹ ಪ್ಯಾರಾಸಿಟಮಾಲ್ ಇದಕ್ಕೆ ಹೊರತಾಗಿದ್ದರೂ ಸಹ ಒಂದಿಷ್ಟು ಪಿತ್ತಜನಕಾಂಗ ತೊಂದರೆಯುಂಟು ಮಾಡುವುದು ಗೊತ್ತಾಯಿತು.


ಇದರ ಮಾರುಕಟ್ಟೆ ಜಾಸ್ತಿಯಾದಂತೆ ಜನ ಸಾಮಾನ್ಯರ ಕೈಗೂ ಸಹ ಲಭ್ಯವಾಗಿ ಪ್ರಥಮ ಬಾರಿಗೆ 1966 ರಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ ತೀವ್ರತರನಾದ ಪಿತ್ತಜನಕಾಂಗದ ತೊಂದರೆ ವರದಿಯಾಯಿತು. ಇಷ್ಟೊತ್ತಿಗಾಗಲೇ ಇದೇ ಗುಂಪಿಗೆ ಸೇರಿದ ಮೆಲಾಕ್ಸಿಕ್ಯಾಮ್ ಮತ್ತಿತರ ಔಷಧಿಗಳೂ ಸಹ ಮಾರುಕಟ್ಟೆ ಪ್ರವೇಶಿಸಿದವು.
ಭಾರತ ದೇಶದಲ್ಲಿ ಡೋಲೊ ಹೆಸರಿನಲ್ಲಿ ಪ್ಯಾರಸಿಟಮಾಲ್ ಮಾತ್ರೆಯನ್ನು ಬೆಂಗಳೂರು ಮೂಲದ ಮೈಕ್ರೋಲ್ಯಾಬ್ಸ್ ಕಂಪನಿ 1993ರಲ್ಲಿ ತಯಾರಿಸಲು ಪ್ರಾರಂಭಿಸಿತು. ಇಂದು ಪ್ರಪಂಚದಾದ್ಯಂತ ಅನೇಕ ಕಂಪನಿಗಳು ಪ್ಯಾರಾಸಿಟಮಾಲ್ ಔಷಧವನ್ನು ಇದೊಂದೆ ಅಂಶ ಅಥವಾ ಇನ್ನಿತರ ಔಷಧಗಳ ಜೊತೆ ಮಿಶ್ರ ಮಾಡಿ ಸಹಸ್ರಾರು ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ.

2. ಹೇಗೆ ಕಾರ್ಯ ನಿರ್ವಹಿಸುವುದು :

ಶರೀರದಲ್ಲಿ ಯಾವುದೇ ಜೀವಕೋಶಕ್ಕೆ ಧಕ್ಕೆಯಾದಾಗ ಅದರ ಹೊರಪೊರೆಯೊಡೆದು ಫಾಸ್ಫೋಲಿಪಿಡ್ಡುಗಳು ಉತ್ಪನ್ನವಾಗುತ್ತವೆ. ಇವು ಫಾಸ್ಫೋಲೈಪೇಸ್ ಎ2 ಎಂಬ ಕಿಣ್ವದ ಸಹಾಯದಿಂದ ಅರೆಕಿಡೋನಿಕ್ ಆಮ್ಲವಾಗಿ ಪರಿವರ್ತಿಸಲ್ಪಡುತ್ತವೆ. ಇದನ್ನು ಸೈಕ್ಲೋಆಕ್ಸಿಜನೇಸ್ 1 ಮತ್ತು 2 ಎಂಬ ಕಿಣ್ವಗಳು ಪ್ರೋಸ್ಟಾಗ್ಲಾಂಡಿನ್ನುಗಳೆಂಬ ರಸವಸ್ತುಗಳನ್ನಾಗಿ ಪರಿವರ್ತಿಸುತ್ತವೆ. ಇವು ಅನೇಕಾನೇಕ ನೋವುಗಳಿಗೆ, ಜ್ವರಕ್ಕೆ, ಉರಿಯೂತಕ್ಕೆ ಮೂಲ ಕಾರಣ. ಪ್ಯಾರಾಸೆಟಮಾಲ್ ಸೇರಿದಮ್ತೆ ಬಹುತೇಕ ನೋವುನಿವಾರಕಗಳು ಸೈಕ್ಲೋಆಕ್ಸಿಜನೇಸ್ 1 ಮತ್ತು 2 ಎಂಬ ಕಿಣ್ವಗಳ ಕಾರ್ಯವನ್ನು ಪ್ರತಿಬಂಧಿಸುವುದರಿಂದ ಪ್ರೋಸ್ಟಾಗ್ಲಾಂಡಿನ್ನುಗಳು ಉತ್ಪನ್ನವಾಗುವುದೇ ಇಲ್ಲ. ಇದರಿಂದ ಜ್ವರ, ನೋವು, ಉರಿಯೂತ ಕಡಿಮೆಯಾಗಿಬಿಡುತ್ತದೆ. ಆದರೆ ಪ್ರೋಸ್ಟಾಗ್ಲಾಂಡಿನ್ನುಗಳು ಹೊಟ್ಟೆಯಲ್ಲಿ ಮ್ಯುಸಿನ್ ಎಂಬ ಲೋಳೆಯಂತ ವಸ್ತುವನ್ನು ಮತ್ತು ಬೈಕಾರ್ಬೋನೇಟ್ ಅಣುಗಳನ್ನು ಉತ್ಪಾದಿಸಿ ಹೊಟ್ಟೆಯ ಪದರವನ್ನು ಹೈಡ್ರೋಕ್ಲೋರಿಕ್ ಆಮ್ಲದಿಂದ ಕಾಪಾಡುತ್ತವೆ. ಕಾರಣ ನೋವು ನಿವಾರಕಗಳನ್ನು ಅನಿಯಮಿತವಾಗಿ ಸೇವಿಸಿದಲ್ಲಿ ಹೊಟ್ಟೆಯಲ್ಲಿ ಹುಣ್ಣು ಆಗುವುದು ಸಹಜ.

3. ಏನಿದರ ಉಪಯೋಗ :

ಜ್ವರ ನಿವಾರಕವಾಗಿ ಅತ್ಯಂತ ಬಳಕೆಯಲ್ಲಿರುವ ಔಷಧಿ ಪ್ಯಾರಸಿಟಮಾಲ್. ಇದಲ್ಲದೇ ಇದಕ್ಕಿರುವ ನೋವುನಿವಾರಕ ಗುಣ ಮತ್ತು ಒಂದಿಷ್ಟು ಪ್ರಮಾಣದ ಊತನಿವಾರಕ ಗುಣ ಇದನ್ನು ಅತ್ಯಂತ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಔಷಧವನ್ನಾಗಿ ಮಾರ್ಪಡಿಸಿತು. ಇದಕ್ಕಿರುವ ಉತ್ತಮ ಪರಿಣಾಮ ಮತ್ತು ಕಡಿಮೆ ಪ್ರಮಾಣದ ಅಡ್ಡಪರಿಣಾಮ ಇದನ್ನು ಓವರ್ ದ ಕೌಂಟರ್ ಅಥವಾ ವೈದ್ಯರ ಚೀಟಿಯಿಲ್ಲದೇ ಸಿಗಬಹುದಾದ ಔಷಧಿಗಳಲ್ಲಿ ಸ್ಥಾನ ಗಿಟ್ಟಿಸಲು ಅನುವು ಮಾಡಿಕೊಟ್ಟಿತು. ಕೊರೊನಾ ಕಾಲದಲ್ಲಂತೂ ಜ್ವರ, ಮೈಕೈ ನೋವು ವೈರಾಣು ಸ್ರವಿಸುವ ವಿಷದಿಂದ ಸಹಜವಾದಾಗ ಪ್ಯಾರಾಸಿಟಮಾಲ್ ಮಾತ್ರೆಗೆ ಎಲ್ಲಿಲ್ಲದ ಬೇಡಿಕೆ ಬಂದು ಡೋಲೊ 650 ಯನ್ನು ಸಾಮಾಜಿಕ ಜಾಲತಾಣದಲ್ಲಿಯೂ ಸಹ ಅಣಕಿಸುವ ಮಟ್ಟಕ್ಕೆ ಹೋಗಿದೆ ! ಪಶುಗಳಲ್ಲಿಯೂ ಸಹ ಇದು ಬಹಳ ಸಾಮಾನ್ಯವಾಗಿ ಜ್ವರ ನಿವಾರಕವಾಗಿ ಬಳಸಲ್ಪಡುವ ಒಂದು ಔಷಧಿಯಾಗಿದೆ.

4. ಅಡ್ಡ ಪರಿಣಾಮಗಳೇನು :

ಯಾವುದೇ ಔಷಧಿಗೆ ಪರಿಣಾಮವಿದ್ದರೆ ಅದಕ್ಕೆ ಅಡ್ಡಪರಿಣಾಮವಿರುವುದು ಶತ ಸಿದ್ದ. ಅಡ್ಡ ಪರಿಣಾಮವಿಲ್ಲದಿದ್ದರೆ ಅದಕ್ಕೆ ಪರಿಣಾಮವೂ ಇಲ್ಲ. ಅಡ್ಡ ಪರಿಣಾಮವಿಲ್ಲದಿದ್ದರೆ ಅದು ಪ್ಲಾಸೆಬೋ ಅಥವಾ ಸುಳ್ಳೌಷಧಿಯಾಗಿ ಕಾರ್ಯನಿರ್ವಹಿಸಬಹುದು ಅಥವಾ ಆ ಕುರಿತು ಅಧ್ಯಯನ ಆಗಿರುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಭೀತಾದ ಮಾತು. ಹಾಗೆಯೇ ಪ್ಯಾರಾಸಿಟಮಾಲಿಗೂ ಸಹ ಸಾಕಷ್ಟು ಅಡ್ಡಪರಿಣಾಮಗಳಿವೆ. ಇದನ್ನು 5-6 ಮಾತ್ರೆ ಒಮ್ಮೆಯೇ ಸೇವಿಸಿದಲ್ಲಿ ಅಥವಾ ನಿರಂತರವಾಗಿ ಸೇವಿಸಿದಲ್ಲಿ ಪಿತ್ತಜನಕಾಂಗ ಹಾಳಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ.

ಕೆಲವೊಮ್ಮೆ ಮೂತ್ರಜನಕಾಂಗಕ್ಕೂ ಸಹ ತೊಂದರೆಯಾಗಬಹುದು. ರಕ್ತದಲ್ಲಿ ಬಿಳಿ ರಕ್ತಕಣಗಳು ಗಣನೀಯವಾಗಿ ಕಡಿಮೆಯಾಗಬಹುದು. ಎರಡು ತಿಂಗಳಿಗಿಂತ ಚಿಕ್ಕ ಮಕ್ಕಳಲ್ಲಿ ಇದರ ಉಪಯೋಗ ಸಲ್ಲದು. ಕೆಲವೊಮ್ಮೆ ಅಲರ್ಜಿ,ವಾಂತಿ, ಹಳದಿ ಮೂತ್ರ, ರಕ್ತಕಣಗಳ ಒಡೆಯುವಿಕೆ, ಹಳದಿ ಚರ್ಮ ಇವೆಲ್ಲಾ ಲಕ್ಷಣಗಳು ಕಂಡು ಬರಬಹುದು. ಇದರ ಜೊತೆ ಆಲ್ಕೋಹಾಲ್ ಸೇವನೆ ವರ್ಜ್ಯ. ಸಾಮಾನ್ಯವಾಗಿ ಆಹಾರ ಸೇವನೆಯ ನಂತರ ಮಾತ್ರೆಯ ಜೊತೆ 1-2 ಲೋಟ ನೀರು ಸೇವಿಸಿದರೆ ಉತ್ತಮ. ಗರ್ಭಿಣಿಯರೂ ಸಹ ಸುಮ್ಮನೆ ತೆಗೆದುಕೊಳ್ಳಬಾರದು ಮತ್ತು ಅಡ್ಡಪರಿಣಾಮಗಳಾದಾಗ ತಕ್ಷಣ ವೈದ್ಯರನ್ನು ಕಾಣುವುದು ಜಾಣತನ.

ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ ಪ್ರಕಾರ 2018 ನೇ ಸಾಲಿನ ವರೆಗೂ ಸಹ 1.5 ಲಕ್ಷಕ್ಕಿಂತ ಜನ ಸ್ವಯಂವೈದ್ಯರಿಂದ ಪ್ಯಾರಾಸಿಟಮಾಲ್ ವಿಷಬಾಧೆಯಿಂದ ಬಳಲಿದ್ದು ಕೋವಿಡ್ ಸಮಯದಲ್ಲಿ ಇದರ ಎರಡರಷ್ಟು ಜನಕ್ಕೆ ತೊಂದರೆಯಾಗಿರಬಹುದು ಎಂಬುದು ಊಹೆಯಾದರೂ ಸಹ ನಂತರದ ದಿನಗಳ ಸಮೀಕ್ಷೆಯಲ್ಲಿ ಇದರ ನಿಖರ ಅಂಕಿ ಅಂಶ ಗೊತ್ತಾಗಬಹುದು.

ಔಷಧಿ ಒಂದು ಎರಡೂ ಕಡೆ ಕೂಯ್ಯುವ ಕರಗಸ ಇದ್ದ ಹಾಗೇ. ಜಾಣ್ಮೆಯಿಂದ ವೈಜ್ಞಾನಿಕ ರೀತಿಯಲ್ಲಿ ಕ್ರಮಬದ್ಧವಾಗಿ ತಜ್ಞರ ಸಲಹೆಯ ಮೇರೆಗೆ ತೆಗೆದುಕೊಂಡರೆ ಉತ್ತಮ ಪರಿಣಾಮ ಬೀರಬಲ್ಲವು. ಇವುಗಳ ಅಡ್ಡ ಪರಿಣಾಮದ ಬಗ್ಗೆ ಪರಿಣಾಮಕ್ಕಿಂತ ಜಾಸ್ತಿ ಅಧ್ಯಯನ ಮಾಡಿರುತ್ತಾರೆ ಎಂದರೆ ತಪ್ಪಿಲ್ಲ. ಇಂಗ್ಲಿಷ್ ಔಷಧಿಗಳೆಲ್ಲಾ ಅಡ್ಡಪರಿಣಾಮಕಾರಿ ಎನ್ನುವುದಕ್ಕಿಂತ ಇವುಗಳ ಅಡ್ಡ ಪರಿಣಾಮಗಳ ಬಗ್ಗೆ ಸಾಧ್ಯವಾದಷ್ಟು ಮಟ್ಟಿಗೆ ಸಾರ್ವಜನಿಕವಾಗಿ ತಿಳಿದಿದೆ ಎಂಬುದು ಮುಖ್ಯ. ಇದಕ್ಕೆ ಪ್ಯಾರಸೆಟಮಾಲ್ ಸಹ ಹೊರತಲ್ಲ.

Exit mobile version