ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿ 5 ವರ್ಷ ವಿಸ್ತರಣೆ : ಮೋದಿ ಘೋಷಣೆ

New Delhi: ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯನ್ನು ಮುಂದಿನ 5 ವರ್ಷಗಳವರೆಗೆ ವಿತರಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಘೋಷಿಸಿದ್ದಾರೆ.

ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಯೋಜನೆಯಿಂದಾಗಿ ದೇಶದಲ್ಲಿರುವ ಸುಮಾರು 80 ಕೋಟಿ ಜನ ಉಚಿತ ಪಡಿತರ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು, “5 ಕೆಜಿ ಉಚಿತ ಅಕ್ಕಿ 5 ವರ್ಷ ವಿಸ್ತರಣೆ. ಇದು ಮೋದಿಜೀಯವರ ಗ್ಯಾರಂಟಿ”. ಗರೀಬ್ ಕಲ್ಯಾಣ್ (Garib Kalyan) ಯೋಜನೆಯನ್ನು ಮತ್ತೆ 5 ವರ್ಷ ವಿಸ್ತರಿಸಿರುವ ಕೇಂದ್ರ ಸಂಪುಟ ನಿರ್ಧಾರ ಪ್ರಧಾನಿ ಶ್ರೀ ನರೇಂದ್ರ ನೋದಿ ಅವರ ಜನಪರ ನಾಯಕತ್ವವನ್ನು ಸಾಕ್ಷೀಕರಿಸಿದಂತಿದೆ.

ಕೋವಿಡ್ (Covid) ಸಾಂಕ್ರಾಮಿಕದ ಅವಧಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸಲು ಜಾರಿಗೆ ತಂದಿದ್ದ ಈ ‘ಅನ್ನ ಯೋಜನೆ’, ಗಂಭೀರ ಬಡತನ ಪ್ರಮಾಣ ಏರಿಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ 5 ವರ್ಷಗಳ ಕಾಲವೂ ದೇಶದ 81.35 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯ ವಿತರಣೆಯನ್ನು ವಿಸ್ತರಿಸಿ ದೇಶದ ಜನತೆಗೆ ‘ಬಹುದೊಡ್ಡ ಅನ್ನಭಾಗ್ಯ’ (AnnaBhagya) ನೀಡಿರುವ ನಮ್ಮ ಮೋದಿಜೀ ಅವರ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

ಅದೇ ರೀತಿ ನರೇಂದ್ರ ಮೋದಿ ಅವರ ಸರ್ಕಾರವು 81 ಕೋಟಿ ಜನರಿಗೆ ಉಚಿತ ಪಡಿತರದ ಉಡುಗೊರೆ ನೀಡಿದೆ. ಕೇಂದ್ರ ಸಚಿವ ಸಂಪುಟವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದ್ದು, ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಚಿತಪಡಿಸುವಲ್ಲಿ ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ರಾಜ್ಯ ಬಿಜೆಪಿ (BJP) ಹೇಳಿದೆ.

ಇದೇ ವೇಳೆ ಮುಂದಿನ 4 ವರ್ಷಗಳಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ (Drone) ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ಕೃಷಿ ಚಟುವಟಿಕೆಗಳಿಗೆ ಬಾಡಿಗೆ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ.

Exit mobile version