ಫೇಸ್‌ಬುಕ್‌ ಇನ್ಮುಂದೆ ಆಗಲಿದೆ ‘ಮೆಟಾ’

ಫ್ರಾನ್ಸಿಸ್ಕೋ : ಹಲವು ದಿನಗಳಿಂದ ಫೇಸ್‌ಬುಕ್ ಹೆಸರು ಬದಲಾವಣೆಯ ಬಗ್ಗೆ ಉಹಾಪೋಹಗಳಿದ್ದು ಅದಕ್ಕೆ ಇದೀಗ ಸ್ಪಷ್ಟನೆ ಸಿಕ್ಕಿದ್ದು,  ಫೇಸ್‌ಬುಕ್ ತನ್ನ ಕಾರ್ಪೋರೇಟ್ ಹೆಸರನ್ನು ಮೆಟಾ ಎಂದು ಬದಲಿಸಿಕೊಂಡಿದೆ. ಈ ಮೂಲಕ ದಿಗ್ಗಜ ಸಾಮಾಜಿಕ ಜಾಲತಾಣ  ಸಂಸ್ಥೆ ಮರುನಾಮಕರಣದ ಮಹತ್ವದ ಹೆಜ್ಜೆ ಇರಿಸಿದೆ. ಫೇಸ್‌ಬುಕ್ ಮಾತೃಸಂಸ್ಥೆಯು ತನ್ನ ಭವಿಷ್ಯದ ಚಟುವಟಿಕೆಗಳನ್ನು ‘ಮೆಟಾ’ ಬ್ರ್ಯಾಂಡ್ ಹೆಸರಿನಲ್ಲಿ ನಡೆಸಲಿದೆ ಎಂದು ಕಂಪೆನಿ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್  ಗುರುವಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರ್ಕ ಜುಕರ್‌ಬರ್ಗ್  ‘ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಬೃಹತ್‌ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಅಲ್ಲದೆ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್‌ 100 ಕೋಟಿ ಜನರನ್ನು ತಲುಪಲಿದೆ’ ಎಂದು ಆಶಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಹಲವು ಯೋಜನೆಗಳಿಗೆ ಫೇಸ್ಬುಕ್‌ ಹೆಸರನ್ನು ಪೂರ್ತಿಯಾಗಿ ಬಳಸುವುದಿಲ್ಲ. ಆದರೆ ಕಾಲಾಂತರದಲ್ಲಿ ನಾವು ಮೆಟಾವರ್ಸ್‌ ಕಂಪನಿಯಾಗಿ ಬದಲಾವಣೆಯಾಗುವ ಭರವಸೆಯಿದೆ ಎಂದು ಹೇಳಿದರು.

‘ಇಂದಿನಿಂದ ನಮ್ಮ ಕಂಪೆನಿ ಇನ್ನು ‘ಮೆಟಾ’ ಆಗಿರಲಿದೆ ಎಂದು ಪ್ರಕಟಿಸಲು ಹೆಮ್ಮೆಯಾಗುತ್ತಿದೆ. ನಮ್ಮ ಯೋಜನೆಗಳು ಬದಲಾಗುವುದಿಲ್ಲ. ಜನರನ್ನು ಒಟ್ಟಿಗೆ ತರುವುದು, ನಮ್ಮ ಆಪ್‌ಗಳು ಮತ್ತು ಅವುಗಳ ಬ್ರ್ಯಾಂಡ್‌ಗಳು ಯಾವುದೂ ಬದಲಾಗುವುದಿಲ್ಲ’ ಎಂದಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್ ಆಪ್‌ಗಳು ಒಂದೇ ಬ್ರ್ಯಾಂಡ್ ಅಡಿಯಲ್ಲಿದ್ದು, ಇವುಗಳನ್ನು ಫೇಸ್‌ಬುಕ್‌ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು. ಇನ್ನು ಮುಂದೆ ಫೇಸ್‌ಬುಕ್ ಸೇರಿದಂತೆ ಕಂಪೆನಿಯ ಎಲ್ಲ ವಹಿವಾಟುಗಳು ‘ಮೆಟಾ’ ಬ್ರ್ಯಾಂಡ್ ಹೆಸರಿನಲ್ಲಿ ನಡೆಯಲಿದೆ.

ಸಾಮಾಜಿಕ ನೆಟ್‌ವರ್ಕ್‌ನ ಮೆಟಾವರ್ಸ್ ಅನ್ನು ನಿರ್ಮಿಸಲು ಸಹಾಯ ಮಾಡಲು ಫೇಸ್‌ಬುಕ್ ಈ ತಿಂಗಳ ಆರಂಭದಲ್ಲಿ 10,000 ಜನರನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತು. ಈ ಹೊಸ ಮೆಟಾವರ್ಸ್‌ನಲ್ಲಿ, ಫೇಸ್‌ಬುಕ್ ವರ್ಚುವಲ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ (ವಿಆರ್/ಎಆರ್) ಬಳಸಿಕೊಂಡು ಹೊಸ ವರ್ಚುವಲ್ ಅನುಭವದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದೆ.

Exit mobile version