ಫೆ. 22ರಿಂದ 6-8ನೇ ತರಗತಿ ಆರಂಭ: ಶಿಕ್ಷಣ ಸಚಿವ ಘೋಷಣೆ

ಬೆಂಗಳೂರು, ಫೆ. 16: ರಾಜ್ಯಾದ್ಯಂತ ಫೆ. 22ರಿಂದ 6, 7 ಮತ್ತು 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗುತ್ತವೆ. ಬೆಂಗಳೂರು ಹಾಗೂ ಕೇರಳ ಗಡಿಭಾಗದ ಪ್ರದೇಶಗಳಲ್ಲಿ ಮಾತ್ರ 6 ಮತ್ತು 7ನೇ ತರಗತಿ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಇಂದು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರೇಶ್ ಕುಮಾರ್, ಎರಡನೇ ಕೋವಿಡ್ ಅಲೆ ಸಾಧ್ಯತೆ ಇತ್ಯಾದಿ ವಿಚಾರವನ್ನೆಲ್ಲಾ ಇಟ್ಟುಕೊಂಡು ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಫೆಬ್ರವರಿ 22ರಿಂದ 6, 7 ಮತ್ತು 8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತವೆ. ಈಗಾಗಲೇ 9ರಿಂದ 12ರವರೆಗಿನ ತರಗತಿಗಳನ್ನು ಆರಂಭ ಮಾಡಿದ್ದೇವೆ. ಈಗ ಅದರ ವಿಸ್ತರಣೆ ಮಾಡಿದ್ದೇವೆ. ವಿದ್ಯಾಗಮ ಪದ್ಧತಿಯಂತೆ ನಡೆಯುತ್ತಿದ್ದ ಆರರಿಂದ ಎಂಟರವರೆಗಿನ ತರಗತಿಗಳನ್ನು ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ನಿರ್ಧರಿಸಿದ್ದೇವೆ.   

ಒಂದರಿಂದ ಐದನೇ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧಾರವಾಗಿಲ್ಲ. ಫೆಬ್ರವರಿ 24 ಮತ್ತು 25ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಲ್ಲಿ ಐದರವರೆಗಿನ ತರಗತಿಗಳನ್ನು ಆರಂಭಿಸಿರುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ಧಾರೆ.

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಇದು ಎರಡನೇ ಅಲೆಗೆ ಎಡೆ ಮಾಡಿಕೊಡುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಕೇರಳ ರಾಜ್ಯದ ಗಡಿಭಾಗದ ಪ್ರದೇಶಗಳಲ್ಲಿ 6 ಮತ್ತು 7ನೇ ತರಗತಿಗಳನ್ನ ನಡೆಸಲಾಗುವುದಿಲ್ಲ. ಇಲ್ಲಿ ಎಂಟು ಮೇಲ್ಪಟ್ಟ ತರಗತಿಗಳಿಗಷ್ಟೇ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ನಲ್ಲಿ ಶಾಲೆ ಆರಂಭದ ಬಗ್ಗೆ ಮೊದಲು ಮಾತುಕತೆ ಆಯಿತು. ಚಳಿಗಾಲವೆಂಬ ಕಾರಣಕ್ಕೆ ಶಾಲೆ ಆರಂಭವನ್ನ ಮುಂದೂಡಲಾಯಿತು. ಡಿಸೆಂಬರ್ನಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕೆಂದು ಆರೋಗ್ಯ ಇಲಾಖೆ ಸೂಚಿಸಿತ್ತು. ಆಗ ಕೊರೋನಾ ಎರಡನೇ ಅಲೆ ಕಾರಣಕ್ಕೆ ಸಭೆ ಮತ್ತೆ ಮುಂದೂಡಲಾಯಿತು. ಪಬ್ಲಿಕ್ ಎಕ್ಸಾಂ ಬರೆಯುವ 10 ಮತ್ತು 12ನೇ ತರಗತಿಯನ್ನ ಮೊದಲು ಆರಂಭಿಸಲಾಯಿತು. ನಂತರ 9 ಮತ್ತು 11ನೇ ತರಗತಿ ಪ್ರಾರಂಭಿಸಿದೆವು. ಈಗ ದೆಹಲಿ ಮತ್ತು ಒಡಿಶಾದಲ್ಲಿ 9ನೇ ತರಗತಿಯಿಂದ ಪ್ರಾರಂಭವಾಗಿವೆ. ಮಹಾರಾಷ್ಟ್ರದಲ್ಲಿ 5ನೇ ತರಗತಿ ಹಾಗೂ ಹರಿಯಾಣದಲ್ಲಿ 6ನೇ ತರಗತಿಯಿಂದ ಶಾಲೆ ಆರಂಭವಾಗಿದೆ. ಪಂಜಾಬ್ನಲ್ಲಿ 1ನೇ ತರಗತಿಯಿಂದಲೇ ಪ್ರಾರಂಭವಾಗಿದೆ ಎಂಬ ವಿಚಾರವನ್ನು ಸುರೇಶ್ ಕುಮಾರ್ ಈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ಧಾರೆ.

Exit mobile version