ಕಟ್ಟಡದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಿದರೆ 10 ಸಾವಿರ ರೂಪಾಯಿ ದಂಡ !

Bengaluru: ಕಟ್ಟಡದ ತ್ಯಾಜ್ಯವನ್ನು ಅನಧಿಕೃತವಾಗಿ ವಿಲೇವಾರಿ ಮಾಡಿದರೆ ತ್ಯಾಜ್ಯ ಉತ್ಪಾದಕರು, ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿದಾರರಿಗೆ ಪ್ರತಿ ಟನ್‌ಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು. ಜೊತೆಗೆ ಪರಿಸರ (ಸಂರಕ್ಷಣೆ) ಕಾಯಿದೆ 1986 ರ ಅನ್ವಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖೇನ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶಿಸಲಾಗಿದೆ.

ಬಿಬಿಎಂಪಿ (BBMP) ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳು, ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಇಕ್ಕೆಲಗಳು ಹಾಗೂ ಹೊರವಲಯದಲ್ಲಿಅನಧಿಕೃತವಾಗಿ ಕಟ್ಟಡದ ಅವಶೇಷಗಳು, ಇತರೆ ಭಗ್ನಾವಶೇಷಗಳನ್ನು ವಿಲೇವಾರಿ ಮಾಡುವವರಿಗೆ 10 ಸಾವಿರ ರೂ. ದಂಡ ವಿಧಿಸಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಅನಾಮಧೇಯ ವ್ಯಕ್ತಿಗಳು, ಏಜೆನ್ಸಿಗಳು (Agency) ಅನಧಿಕೃತವಾಗಿ ಕಟ್ಟಡಗಳ ಅವಶೇಷಗಳು ಹಾಗೂ ಇತರೆ ತ್ಯಾಜ್ಯವನ್ನು ನಗರದ ಹೊರವಲಯದಲ್ಲಿ ಸುರಿಯುತ್ತಿವೆ. ಇದರಿಂದ ನಗರದೊಳಗೆ ಪ್ರವೇಶಿಸುವ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತಂತೆ ನಕಾರಾತ್ಮಕ ಮನೋಭಾವ ಮೂಡುತ್ತಿದೆ. ಅಲ್ಲದೆ ನಗರದ ಘನತೆಗೆ ಧಕ್ಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಸಾಗಣೆ, ವಿಲೇವಾರಿ ಮಾಡುವ ಜವಾಬ್ದಾರಿಯು ಸಂಬಂಧಪಟ್ಟ ತ್ಯಾಜ್ಯ ಉತ್ಪಾದಕರದ್ದೇ ಆಗಿರುತ್ತದೆ. ಈ ತ್ಯಾಜ್ಯವನ್ನು ಪಾಲಿಕೆಯಿಂದ ಅಧಿಕೃತವಾಗಿ ಗುರುತಿಸಲಾಗಿರುವ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ವಿಲೇವಾರಿ ಮಾಡಬೇಕಿದೆ.

ತ್ಯಾಜ್ಯವನ್ನು ಅನಧಿಕೃತವಾಗಿ ಎಲ್ಲೆಂದರಲ್ಲಿ, ಸಾರ್ವಜನಿಕ ಸ್ಥಳಗಳು, ರಸ್ತೆಗಳ ಬದಿಯಲ್ಲಿ, ಚರಂಡಿಗಳು, ಖಾಲಿ ನಿವೇಶನ ಅಥವಾ ಕ್ವಾರಿಗಳಲ್ಲಿ ಸುರಿಯುವುದನ್ನು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಗಳು-2016 ರನ್ವಯ ನಿಷೇಧಿಸಲಾಗಿದ್ದು, ದಂಡಾರ್ಹ ಮತ್ತು ಕಾನೂನಾತ್ಮಕವಾಗಿ ಅಪರಾಧವಾಗಿದೆ ಎಂದು ಸೂಚಿಸಿದ್ದಾರೆ.

ನಗರದ ಹೊರವಲಯದಲ್ಲಿ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಅನಧಿಕೃತವಾಗಿ ವಿಲೇವಾರಿ ಮಾಡುವ ಎಲ್ಲ ವಾಹನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಎಲ್ಲಾ ಸೂಪರವೈಸರ್‌, ಕಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್‌ ಮಾರ್ಷಲ್‌ಗಳು, ಮಾರ್ಷಲ್‌ ಸೂಪರ್‌ವೈಸರ್‌ಗಳು ತಪಾಸಣೆ ನಡೆಸಲಿದ್ದಾರೆ. ನಿಯಮ ಉಲ್ಲಂಘಿಘಿಸಿದವರಿಗೆ ನಿಯಮಾವಳಿಗಳನ್ವಯ ದಂಡ ವಿಧಿಸಲಾಗುತ್ತದೆ. ಬಳಿಕ ವಾಹನಗಳನ್ನು ವಶಪಡಿಸಿಕೊಂಡು ನಂತರ ಸಮೀಪದ ಪೊಲೀಸ್‌ ಠಾಣೆಯ ಸುಪರ್ದಿಗೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮೇಘಾ ಮನೋಹರ ಕಂಪು

Exit mobile version