ಹೆಂಡತಿಗೆ ಕಿರುಕುಳ : ರವಿ ಚೆನ್ನಣ್ಣನವರ್ ಸಹೋದರನ ವಿರುದ್ದ ಎಫ್‍ಐಆರ್!

police

ಹಿರಿಯ ಐಪಿಎಸ್ ಅಧಿಕಾರಿ(IPS Officer) ರವಿ ಡಿ ಚೆನ್ನಣ್ಣನವರ್(Ravi D Chennananavar) ಅವರ ಸಹೋದರ ರಾಘವೇಂದ್ರ ಡಿ ಚೆನ್ನಣ್ಣನವರ್ ವಿರುದ್ದ ಹೆಂಡತಿಗೆ ಕಿರುಕುಳ ಮತ್ತು ವರದಕ್ಷಿಣೆ ಪಡೆದಿರುವ ಆರೋಪದಡಿ ಬೆಂಗಳೂರಿನ(Bengaluru) ಚಂದ್ರಾಲೇಔಟ್(Chandralayout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಕರಣ ದಾಖಲಿಸಿರುವ ರಾಘವೇಂದ್ರ ಚೆನ್ನಣ್ಣನವರ್ ಅವರ ಪತ್ನಿ ರೋಜಾ ಅವರು, ರಾಘವೇಂದ್ರ ಚೆನ್ನಣ್ಣನವರ್ ಅವರು 2015ರಲ್ಲಿ ನನ್ನನ್ನು ಮದುವೆಯಾಗಿದ್ದರು. ಆದರೆ ನನ್ನನ್ನು ಮದುವೆಯಾಗುವುದಕ್ಕೂ ಮುನ್ನ ಅವರಿಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದನ್ನು ನನ್ನಿಂದ ಮುಚ್ಚಿಟ್ಟು ಮರುಮದುವೆ ಮಾಡಲಾಗಿತ್ತು. ಈ ವಿಷಯವನ್ನು ರಾಘವೇಂದ್ರ ಚೆನ್ನಣ್ಣನವರ್ ಅವರ ಸಹೋದರ ರವಿ ಚೆನ್ನಣ್ಣನವರ್ ಅವರ ಗಮನಕ್ಕೆ ಅನೇಕ ಬಾರಿ ತಂದಿದ್ದೇನೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಇದೀಗ ರಾಘವೇಂದ್ರ ಚೆನ್ನಣ್ಣನವರ್ ಆ ಯುವತಿಯೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಾರೆ ಎಂದು ರೋಜಾ ಆರೋಪಿಸಿದ್ದಾರೆ. ಇನ್ನು ರಾಘವೇಂದ್ರ ಚೆನ್ನಣ್ಣನವರ್ ಸದ್ಯ ಇಬ್ಬರೊಂದಿಗೂ ಸಂಸಾರ ನಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಆ ಯುವತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸು ಎಂದು ರವಿ ಚೆನ್ನಣ್ಣನವರ್ ನನಗೆ ಹೇಳಿದ್ದಾರೆ ಎಂದು ರೋಜಾ ಹೇಳಿದ್ದಾರೆ. ಆದರೆ ರೋಜಾ ಅವರು ಮಾತ್ರ ನನಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆ ಮಾಡಿಕೊಡುವಾಗ ನನ್ನ ತಂದೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಮದುವೆಯಾದ ನಂತರವೂ ನನ್ನ ತಂದೆಯಿಂದ ರಾಘವೇಂದ್ರ ಚೆನ್ನಣ್ಣನವರ್ ಅನೇಕ ಬಾರಿ ಹಣ ಪಡೆದಿದ್ದಾರೆ.

ಮತ್ತೆ ಹಣ ಬೇಕೆಂದು ಕಿರುಕುಳವನ್ನು ನೀಡಿದ್ದಾರೆ ಎಂದು ಆರೋಪಿಸಿರುವ ರೋಜಾ ಅವರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರು ಕೂಡಾ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Exit mobile version