ಹೊಟ್ಟೆಕಿಚ್ಚಿಗೆ ಮಾರುಕಟ್ಟೆ ಸುಟ್ಟೋಯ್ತು! ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಯ್ತು ರಾಣೆಬೆನ್ನೂರು ತರಕಾರಿ ಮಾರುಕಟ್ಟೆ.

ರಾಣೆಬೆನ್ನೂರು ಸೆ 20 : ನಿನ್ನೆ ತಡರಾತ್ರಿ ಹಾವೇರಿಯ ರಾಣೆಬೆನ್ನೂರಿನ ಮಾರಕಟ್ಟೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಯ್ತು. ಧಗ ಧಗ ಉರಿಯುತ್ತಿದ್ದ ಬೆಂಕಿ ಕ್ಷಣ ಮಾತ್ರದಲ್ಲಿ ನೂರಾರು ಅಂಗಡಿಗಳನ್ನ ಸುಟ್ಟು ಹಾಕಿತ್ತು. ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ನೂರಾರು ಬಡ ವ್ಯಾಪಾರಿಗಳ ಬದುಕು ಬೀದಿಗೆ ಬಿತ್ತು.

ರಾಣೆಬೆನ್ನೂರಿನ ದುರ್ಗಾ ಮಾರುಕಟ್ಟೆಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತು. ಆದ್ರೆ ಮಾರುಕಟ್ಟೆಯ ಅಂಗಡಿಗಳಿಗೆ ಪ್ಲಾಸ್ಟಿಕ್‌ ಹೊದಿಕೆಯನ್ನು ಹಾಕಿದ್ದರಿಂದ ಅದು ಕ್ಷಣ ಮಾತ್ರಕ್ಕೆ ಬೆಂಕಿಗೆ ತುತ್ತಾಗಿ ಕರಕಲಾಯಿತು. ಕೆಲ ದುಷ್ಕರ್ಮಿಗಳು ಹೊಟ್ಟೆಕಿಚ್ಚಿನಿಂದ ಈ ಕೃತ್ಯ ಎಸಗಿದ್ದಾರೆ. ಇದರಿಂದ ನೂರಾರು ಬಡ ವ್ಯಾಪಾರಿಗಳ ಬದುಕಿಗೆ ಬೆಂಕಿ ಬಿದ್ದಿದೆ ಅನ್ನೋದು ನೊಂದ ವ್ಯಾಪಾರಿಗಳ ಆರೋಪ

ಮಾರುಕಟ್ಟೆಗೆ ಬಿದ್ದ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದವರು ಹರಸಾಹಸಪಟ್ಟರು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಷ್ಟರಲ್ಲಿ ಅಂಗಡಿಯೊಳಗಿದ್ದ ಸಾಮಾಗ್ರಿಗಳೆಲ್ಲಾ ಸುಟ್ಟು ಕರಕಲಾಗಿತ್ತು. ಇದರಿಂದ ನೂರು ಸಣ್ಣ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

ಅಗ್ನಿ ಅನಾಹುತಕ್ಕೆ ಕಾರಣ ಏನು? ಇದರ ಹಿಂದೆ ಯಾರ ಷಡ್ಯಂತ್ರ ಇದೆ ಅನ್ನೋದನ್ನು ರಾಣೆಬೆನ್ನೂರು ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೊರೋನಾದಿಂದ ಈಗಾಗಲೇ ಕಂಗಾಲಾಗಿರುವ ಬಡ ವ್ಯಾಪಾರಿಗಳಿಗೆ ಈ ಅಗ್ನಿ ಅವಘಡ ಭಾರೀ ಶಾಕ್‌ ನೀಡಿದೆ. ಸರ್ಕಾರ ಈ ಬಡ ವ್ಯಾಪಾರಿಗಳಿಗೆ ಪರಿಹಾರ ನೀಡಿ ಅವರಿಗೆ ಸಾಂತ್ವಾನ ಹೇಳಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

Exit mobile version