ಗುಡಿಸಲಿಗೆ ಹೊತ್ತಿಕೊಂಡ ಬೆಂಕಿ: 6 ಮಕ್ಕಳು ಸಜೀವ ದಹನ

ಬಿಹಾರ, ಮಾ.31: ಇಲ್ಲಿನ ಅರಾರಿಯಾ ಜಿಲ್ಲೆಯ ಕವಾಯಾ ಎಂಬ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 6 ಮಕ್ಕಳು ಸಜೀವ ದಹನವಾಗಿದ್ದಾರೆ. ಗುಡಿಸಲಿನೊಳಗೆ ಮಕ್ಕಳು ಜೋಳ ಸುಡುತ್ತಿದ್ದಾಗ ಅಡುಗೆ ಮನೆಯ ಬೆಂಕಿ ಇದ್ದಕ್ಕಿದ್ದಂತೆ ಗುಡಿಸಲಿನ ಮೇಲ್ಭಾಗ ಮತ್ತು ಪಕ್ಕದಲ್ಲಿ ಹಾಕಿದ್ದ ಹುಲ್ಲಿಗೆ ತಾಗಿದೆ. ಒಂದೇ ಸಲ ಬೆಂಕಿ ಇಡೀ ಮನೆಯನ್ನು ಆವರಿಸಿಕೊಂಡಿದ್ದರಿಂದ ಮಕ್ಕಳಿಗೆ ಹೊರಗೆ ಓಡಿಬರಲು ಸಾಧ್ಯವಾಗಿಲ್ಲ. ಇದರಿಂದ ಒಳಗಿದ್ದ 6 ಮಕ್ಕಳೂ ಜೀವಂತವಾಗಿ ಸುಟ್ಟು ಹೋಗಿದ್ದಾರೆ.

ಜೋಳದ ಕೊಯ್ಲಾದ್ದರಿಂದ ಅಕ್ಕಪಕ್ಕದ ಮನೆಯವರೆಲ್ಲರೂ ಹೊಲಕ್ಕೆ ಹೋಗಿದ್ದರು. ಈ ವೇಳೆ ಮನೆಯೊಳಗೆ ಆಟವಾಡುತ್ತಿದ್ದ ಗೆಳೆಯರಲ್ಲಿ ದೊಡ್ಡವನು ಜೋಳ ಸುಡಲು ಒಲೆಯ ಬೆಂಕಿ ಊದಿದ್ದಾನೆ ಎನ್ನಲಾಗಿದೆ. ಅದೇ ಕಾರಣಕ್ಕೆ ಅಡುಗೆ ಮನೆಯ ಪಕ್ಕದಲ್ಲೇ ಸರಿದಿದ್ದ ಒಣಹುಲ್ಲಿನ ರಾಶಿ ಮತ್ತು ಮನೆಯ ಮೇಲ್ಭಾಗದಲ್ಲಿ ಹಾಕಿದ್ದ ಹುಲ್ಲಿಗೆ ಬೆಂಕಿ ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ನೀರು ಹಾಕಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಆದರೆ, ಒಣಹುಲ್ಲಿನ ಮನೆಯಾಗಿದ್ದರಿಂದ ಮತ್ತು ತೀವ್ರವಾದ ಬಿಸಿಲು ಇದ್ದುದರಿಂದ ಬೆಂಕಿ ವೇಗವಾಗಿ ಹರಡಿ 6 ಮಕ್ಕಳನ್ನು ಬಲಿ ಪಡೆದುಕೊಂಡಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರಾದರೂ ಅಷ್ಟರಲ್ಲಾಗಲೇ ಮಕ್ಕಳ ಜೀವ ಹೋಗಿತ್ತು. ಗುಡಿಸಲಿನಿಂದ ಮಕ್ಕಳ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತಪಟ್ಟ ಮಕ್ಕಳೆಲ್ಲರೂ 3ರಿಂದ 6 ವರ್ಷದವರಾಗಿದ್ದಾರೆ. ಗುಲ್ನಾಜ್, ಅಶ್ರಫ್, ದಿಲ್ಬಾರ್, ತಬ್ರೆಜ್, ಅಲಿ ಹಸನ್, ಹುಸ್ನಾರಾ ಮೃತಪಟ್ಟವರಾಗಿದ್ದಾರೆ. ಕಣ್ಣೆದುರೇ ಮಕ್ಕಳು ಜೀವಂತವಾಗಿ ಸುಟ್ಟುಹೋಗುತ್ತಿರುವುದನ್ನು ಕಂಡರೂ ಅವರನ್ನು ಕಾಪಾಡಲಾಗದ ಕಾರಣಕ್ಕೆ ಮಕ್ಕಳ ಪೋಷಕರು ಗೋಳಾಡುತ್ತಿದ್ದಾರೆ.

Exit mobile version