ಗುಜರಾತ್​ನ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ: 18 ಜನ ಸಜೀವ ದಹನ

ಗುಜರಾತ್, ಮೇ. 01: ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 12 ಕೋವಿಡ್ ರೋಗಿಗಳು ಮತ್ತು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 18 ಜನ ಮೃತಪಟ್ಟಿರುವ ಘಟನೆ ಗುಜರಾತ್​ನ ಭರೂಚ್​​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದೆ.

ಇಲ್ಲಿನ ವೆಲ್ಫೇರ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, 12 ಕೋವಿಡ್ ರೋಗಿಗಳು ಮೃತಪಟ್ಟಿರುವುದು ದೃಢವಾಗಿದೆ, ಆದರೆ ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಭರೂಚ್​ ಎಸ್​ಪಿ ರಾಜೇಂದ್ರಸಿನ್ಹ್ ಚೂಡಾಸಮ ತಿಳಿಸಿದ್ದಾರೆ.

ನಾಲ್ಕು ಅಂತಸ್ತಿನ ಈ ಕೋವಿಡ್ ಆಸ್ಪತ್ರೆ ಭರೂಚ್-ಜಂಬುಸಾರ್ ಹೈವೇ ಬಳಿಯಲ್ಲಿದೆ. ಆಸ್ಪತ್ರೆಯ ನೆಲಮಹಡಿಯಲ್ಲಿರುವ ಕೋವಿಡ್ ವಾರ್ಡ್ ಒಂದರಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಅಗ್ನಿ ಆಕಸ್ಮಿಕ ಉಂಟಾಗಿದೆ. ಈ ಘಟನೆಯಲ್ಲಿ ಕೋವಿಡ್ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಅಗ್ನಿ ಆಕಸ್ಮಿಕದಲ್ಲಿ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸೇರಿ ಸುಮಾರು 50 ರೋಗಿಗಳನ್ನು ಕಾಪಾಡಿದ್ದಾರೆ.

ಒಂದು ಗಂಟೆಯ ಸತತ ಪ್ರಯತ್ನದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು 50 ರೋಗಿಗಳನ್ನು ಕಾಪಾಡಲಾಗಿದೆ. ರೋಗಿಗಳನ್ನು ಸಮೀಪದ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಬೆಂಕಿ ಅನಾಹುತಕ್ಕೆ ಮೂಲ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

Exit mobile version