ಮೊದಲ ಏಕದಿನ ಪಂದ್ಯ: ಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಜಯ

ಕೊಲಂಬೊ, ಜು. 19: ನಾಯಕ ಶಿಖರ್ ಧವನ್(ಅಜೇಯ 86) ಹಾಗೂ ಇಶಾನ್ ಕಿಶನ್(59) ಅವರ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ, 7 ವಿಕೆಟ್ ಗಳ ಭರ್ಜರಿ‌ ಜಯ ಸಾಧಿಸಿತು.

ಇಲ್ಲಿನ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು. 263 ರನ್ ಸವಾಲು ಬೆನ್ನಹತ್ತಿದ ಭಾರತ 36.4 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.

ಭಾರತದ ಪರ ಧವನ್‌ ಮತ್ತು ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ ಗೆ 58 ರನ್ ಸೇರಿಸಿದರು. 9 ಬೌಂಡರಿಗಳನ್ನು ಬಾರಿಸಿದ ಶಾ 43 ರನ್ ಗಳಿಸಿ ಧನಂಜಯ್‌ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ನಂತರ ಧವನ್ ಹಾಗೂ ಇಶಾನ್ ಕಿಶಾನ್ ಜತೆಗೂಡಿ ತಂಡದ ಮೊತ್ತವನ್ನು 143 ರವರೆಗೆ ಕೊಂಡೊಯ್ದರು. 49 ಎಸೆತಗಳಲ್ಲಿ 8 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿ ಸಂದಕನ್ ಅವರಿಗೆ ವಿಕೆಟ್ ಒಪ್ಪಿಸಿದರು. ಮನೀಶ್ ಪಾಂಡೆ 26 ರನ್ ಗಳಿಸಿ ಔಟಾದರು. ಬಳಿಕ ಧವನ್ ಮತ್ತು ಸೂರ್ಯ ಕುಮಾರ್ ಜೊತೆಯಾಗಿ ತಂಡವನ್ನು ವಿಜಯದತ್ತ ಕೊಂಡೊಯ್ದರು. ಸೂರ್ಯ ಕುಮಾರ್ ಅಜೇಯ 31 ರನ್ ಗಳಿಸಿದರು.

ಇದಕ್ಕೂ ಮುನ್ನ ಭಾರತದ ಬೌಲರ್ ಗಳ ದಾಳಿಗೆ ಸಿಲುಕಿದ ಲಂಕಾ ಬ್ಯಾಟ್ಸಮನ್ ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಚಮಿಕಾ ಕರುಣಾ ರತ್ನೆ ಅಜೇಯ 43ರನ್ ಗಳಿಸಿದರು. ಅವಿಷ್ಕಾ ಫರ್ನಾಂಡೊ 32, ಚರಿತಾ ಅಸಾಲಂಕಾ 38, ದಸುನ್ ಶನಕಾ 39 ರನ್ ಗಳಿಸಿದ್ದರಿಂದ ತಂಡ ಸಾಧಾರಣ ಮೊತ್ತ ಗಳಿಸಲು ಸಾಧ್ಯವಾಯಿತು.

ಭಾರತದ ಪರ ದೀಪಕ್ ಚಹಾರ್, ಯಜುವೇಂದ್ರ ಚಹಾಲ್, ಕುಲ್ ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಹಾರ್ದಿಕ್ ಮತ್ತು ಕೃನಾಲ್ ತಲಾ ಒಂದು ವಿಕೆಟ್ ಗಳಿಸಿದರು. ಸರಣಿಯ ಮುಂದಿನ ಪಂದ್ಯ ಜು.20ರಂದು ಕೊಲಂಬೊದಲ್ಲಿ ನಡೆಯಲಿದೆ.

Exit mobile version