ಬಿಹಾರದ ಮಾಜಿ ಸಚಿವ, ಜೆಡಿಯು ಶಾಸಕ ಮೇವಾಲಾಲ್ ಚೌಧರಿ ಕೊರೊನಾಗೆ ಬಲಿ

ಬಿಹಾರ್, ಏ. 19: ಬಿಹಾರದ ಮಾಜಿ ಶಿಕ್ಷಣ ಸಚಿವ, ಜೆಡಿಯು ಶಾಸಕ ಮೇವಾಲಾಲ್ ಚೌಧರಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಮೇವಾಲಾಲ್ ಚೌಧರಿ ಪುಣೆಯ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ವಾರ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದ ಮೇವಾಲಾಲ್ ಚೌಧರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಪುಣೆಯ ಪಾರಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಮೃತಪಟ್ಟಿದ್ದಾರೆ.

ಬಿಹಾರದ ತಾರಾಪುರ ಕ್ಷೇತ್ರದ ವಿಧಾನಸಭಾ ಶಾಸಕರಾಗಿದ್ದ ಮೇವಾಲಾಲ್ ಚೌಧರಿಯನ್ನು ಭ್ರಷ್ಟಚಾರದ ಆರೋಪದಡಿಯಲ್ಲಿ ಶಿಕ್ಷಣ ಸಚಿವ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು.

ಬಿಹಾರ ಸರ್ಕಾರ ಭಾನುವಾರ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಬಿಹಾರದ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಮೇ 15 ರವರೆಗೆ ಸ್ಥಗಿತಗೊಳ್ಳಲಿವೆ ಎಂದು ರಾಜ್ಯ ಸರ್ಕಾರ ನಿರ್ಧರಿಸಿ ಘೋಷಿಸಿದೆ. ಜೊತೆಗೆ ರಾಜ್ಯದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಒಂದು ತಿಂಗಳ ಬೋನಸ್​ ವೇತನವನ್ನು ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ.

Exit mobile version