ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ

ಮೈಸೂರು, ಮೇ. 25: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಮೈಸೂರಿಗೆ ಭೇಟಿ ನೀಡಿದ ಅವರು ಡಿಡಿಪಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸ್ಮಾರ್ಟ್‌ಫೋನ್ ವಿತರಣೆ ಸಂಬಂಧ ಈಗಾಗಲೇ ಸರ್ವೇ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತೋ ಗೊತ್ತಿಲ್ಲ. ಹಳ್ಳಿಗಳ‌ ಬಡ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಬಾರದು. ಇವತ್ತು ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ ಫೋನ್ ಅಗತ್ಯವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಮಕ್ಕಳ ಹಾಜರಾತಿ,‌ ಸ್ಮಾರ್ಟ್‌‌ ಫೋನ್ ಅಗತ್ಯತೆ ಬಗ್ಗೆ ವರದಿ ನೀಡಲು ಎಲ್ಲಾ ಡಿಡಿಪಿಐಗಳಿಗೆ ಸೂಚನೆ ನೀಡಿದ್ದೇನೆ. ಈಗ ಎಂಟು ತಿಂಗಳು, ವರ್ಷಕ್ಕೆ ಒಮ್ಮೆ ಫೋನ್ ಬದಲಾಯಿಸುವುದು ಟ್ರೆಂಡ್ ಆಗಿದೆ. ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸ್ಮಾರ್ಟ್‌ಫೋನ್ ಬ್ಯಾಂಕ್‌ ಮಾಡಬಹುದಾ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಸಾಮಾನ್ಯವಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿರುತ್ತಾರೆ. ಹೀಗಾಗಿ ತಜ್ಞರೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Exit mobile version