ಮೇ 1ರಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ವಿತರಣೆ; ಯುಪಿ ಸರ್ಕಾರದ ಮಹತ್ವದ ಘೋಷಣೆ

ಲಖನೌ, ಏ. 21: ಮೇ 1ರಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ. ಈಗಾಗಲೇ ಹಿರಿಯ ನಾಗರಿಕರಿಗೆ, 45ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಮೇ 1ರಿಂದ ದೇಶದಲ್ಲಿರುವ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಒಂದು ಹೆಜ್ಜೆ ಮುಂದೆ ಹೋಗಿ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ದೇಶದಲ್ಲಿ ವಿಪರೀತವಾಗಿದ್ದು, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಗುಜರಾತ್​, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿದೆ. ನಿಯಂತ್ರಣಕ್ಕಾಗಿ ರಾಜ್ಯಸರ್ಕಾರಗಳು ​ನೈಟ್​ಕರ್ಫ್ಯೂ, ವೀಕೆಂಡ್ ಕರ್ಫ್ಯೂದಂಥ ಕಠಿಣ ನಿಯಮಗಳನ್ನು ಜಾರಿ ಮಾಡುತ್ತಿವೆ. ಹಾಗೇ, ಲಾಕ್​ಡೌನ್​​ನ್ನು ಕೊನೇ ಅಸ್ತ್ರವನ್ನಾಗಿ ಪ್ರಯೋಗಿಸಿ ಎಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದಾರೆ.

ಮೇ 1ರಿಂದ ಶುರುವಾಗುವ ಲಸಿಕೆ ವಿತರಣಾ ಅಭಿಯಾನಕ್ಕೆ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಇದರೊಟ್ಟಿಗೆ ಸರ್ಕಾರ ಸಾರ್ವಜನಿಕರಿಗೆ ಔಷಧ, ಹಾಸಿಗೆ, ಆಕ್ಸಿಜನ್​ ಸೇರಿ ಇನ್ನಿತರ ಎಲ್ಲ ವ್ಯವಸ್ಥೆಗಳನ್ನೂ ನೀಡಲು ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ರೂಪುರೇಷೆ ಮಾಡಲು ಆರೋಗ್ಯ ಸಚಿವ ಜೈ ಪ್ರತಾಪ್​ ಸಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಅವರಿಗೆ ಯೋಗಿ ಆದಿತ್ಯನಾಥ್​ ಸೂಚಿಸಿದ್ದಾರೆ. ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದರೂ ಯಾರಾದರೂ ಹಣ ಪಾವತಿಸಲು ಸಿದ್ಧರಿದ್ದರೆ, ಅವರು ಖಾಸಗಿ ಆಸ್ಪತ್ರೆಯಲ್ಲೇ ಲಸಿಕೆ ಪಡೆಯಬೇಕು ಎಂದು ಸರ್ಕಾರ ಹೇಳಿದೆ.

Exit mobile version