“ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು” ಎಂಬ ಗಾದೆ ಮಾತಿನಂತೆ, ಮದುವೆ ಎಂಬುದು ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧವಲ್ಲ, ಕುಟುಂಬ ಕುಟುಂಬಗಳ ನಡುವಿನ ಮನಸ್ಸಿನ ಸಂಬಂಧ. ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ, ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು ಪ್ರಪಂಚದ ಸೃಷ್ಟಿಯಲ್ಲಿ ಇದ್ದೇ ಇರುತ್ತದೆ ಎನ್ನುವುದು ನಮ್ಮ ನಂಬಿಕೆ.

ಆದರೆ, ಇತ್ತೀಚಿನ ದಿನಗಳಲ್ಲಿ ಹುಡುಗಿ- ಹುಡುಗಿ, ಹುಡುಗ – ಹುಡುಗನ ಮದುವೆ ಕೂಡ ಪ್ರಸಿದ್ಧಿ ಪಡೆಯುತ್ತಿದೆ. ಹಾಗೆಯೇ ಇನ್ನೊಂದೆಡೆ ಸಲಿಂಗಕಾಮಿ ದಂಪತಿಗಳು ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಹೌದು, ಕೊಲ್ಕತ್ತಾ ಮೂಲದ ಪ್ರಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ಅಭಿಷೇಕ್ ರೇ ಹಾಗೂ ಗುರುಗ್ರಾಮದ ಡಿಜಿಟಲ್ ಮಾರ್ಕೆಟಿಂಗ್ ನಿಪುಣರಾಗಿರುವ ಚೈತನ್ಯ, ಹಲವು ವರ್ಷಗಳಿಂದ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. 2020 ರಲ್ಲಿ ಅವರಿಬ್ಬರು ಪರಸ್ಪರ ಭೇಟಿಯಾಗಿದ್ದರಂತೆ, ನಂತರ ಇವರಿಬ್ಬರ ನಡುವೆ ಪ್ರೀತಿಯಾಗಿತ್ತು.
ಇವರಿಬ್ಬರೂ ಕಳೆದ ಡಿಸೆಂಬರ್‌ನಿಂದಲೇ ಮದುವೆಯ ಬಗ್ಗೆ ಯೋಚನೆ ಮಾಡುತ್ತಿದ್ದರು.
ಆದರೆ ಸಲಿಂಗಿಗಳ ಮದುವೆ ಎಂದರೆ ಅಷ್ಟು ಸುಲಭವಾಗಿ ಯಾರಾದರೂ ಒಪ್ಪಿಕೊಳ್ಳುತ್ತಾರೆಯೇ? ಮನೆಯಲ್ಲಿ ಇಬ್ಬರೂ ವಿಷಯ ಹೇಳಿದರು, ಆಗ ದೊಡ್ಡ ಗಲಾಟೆಯೇ ನಡೆಯಿತು. ಆದರೆ ನಿಧಾನವಾಗಿ ಎಲ್ಲರೂ ಅರ್ಥ ಮಾಡಿಕೊಂಡರು. ಹೀಗಾಗಿ ಜುಲೈ 3 ರಂದು ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆ ಮೇರೆಗೆ ದೊಡ್ಡ ಮಟ್ಟದಲ್ಲಿ ಮದುವೆ ನಡೆಯಿತು. ಮೆಹಂದಿ, ಸಂಗೀತ, ಕಾಕ್ಟೆಲ್ ನೈಟ್ ಹೀಗೆ ಎಲ್ಲವೂ ಜೋರಾಗಿತ್ತು. ಕೋಲ್ಕತ್ತಾದ ಕಾಮಾಕ್ ಸ್ಟ್ರೀಟ್‌ನಲ್ಲಿರುವ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮದುವೆ ಮಾಡಲಾಯಿತು.

ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ ಪುರೋಹಿತರ ಪ್ರತಿಕ್ರಿಯೆಯು ದಂಪತಿಗಳಿಗೆ ಹೆಚ್ಚು ಭರವಸೆ ನೀಡಿತು. ಪುರೋಹಿತರು ಜೋಡಿಯನ್ನು ಪಂಜುಧಾರಿಗಳು ಎಂದು ಹೇಳಿದ್ದು ಮಾತ್ರವಲ್ಲದೆ ಮಂತ್ರಗಳನ್ನು ಸ್ಪಷ್ಟವಾಗಿ ವಿವರಿಸಿದರು. ಆದರೆ ಇಲ್ಲಿ ಲಿಂಗ ನಿರ್ದಿಷ್ಟತೆಯನ್ನು ಹೊಂದಿರುವುದರಿಂದ ಕೆಲವು ಮಂತ್ರಗಳನ್ನ ಹೇಗೆ ಉಚ್ಚರಿಸಲು ಸಾಧ್ಯವಾಗಲಿಲ್ಲ ಎಂಬುದನ್ನೂ ಸೇರಿಸಿದರು. ಆದರೆ ಸಲಿಂಗಕಾಮಿ ವಿವಾಹವನ್ನು ಅತ್ಯಂತ ಪ್ರಗತಿಪರ ಕ್ರಮವೆಂದು ಶ್ಲಾಘಿಸಿದರು.
- ಪವಿತ್ರ