ಮುಷ್ಕರನಿರತ ಸಾರಿಗೆ ನೌಕರರನ್ನು ಪೊಲೀಸ್‌ ಬಲದಿಂದ ಬೆದರಿಸುವ ಸರ್ಕಾರದ ನಡೆ ಖಂಡನೀಯ: ಸಿದ್ದರಾಮಯ್ಯ

ಬೆಂಗಳೂರು, ಏ. 14: ರಾಜ್ಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರವನ್ನು
ರಾಜ್ಯ ಬಿಜೆಪಿ ಸರ್ಕಾರ ಪೊಲೀಸ್ ಬಲದ ಮೂಲಕ ದಮನಿಸಲು ಹೊರಟಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅಮಾನವೀಯ ನಡೆ ಎಂದು ಟೀಕಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ರಾಜ್ಯದ ಬಹಳ‌ ಕಡೆಗಳಲ್ಲಿ ರಾಜ್ಯ ಸರ್ಕಾರ ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರನ್ನು ವಾರಂಟ್ ಇಲ್ಲದೆ ಬಂಧಿಸುತ್ತಿದೆ. ಆ ಮೂಲಕ ಮುಖ್ಯಮಮಂತ್ರಿಗಳು ಕರ್ನಾಟಕವನ್ನು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಅಕ್ರಮವಾಗಿ ವರ್ಗಾವಣೆ, ಅಮಾನತ್ ಮತ್ತು ಮನೆ ಖಾಲಿ‌ಮಾಡಿಸುವ ಮೂಲಕ ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರನ್ನು ರಾಜ್ಯದ ಮುಖ್ಯಮಂತ್ರಿಗಳು ಬೆದರಿಸಲು ಹೊರಟಿದ್ದಾರೆ ಎಂದು ಕಿಡಿಕಾರಿರುವ ಅವರು, ಈಗಲೂ ಕಾಲ ಮಿಂಚಿಲ್ಲ, ಮುಖ್ಯಮಂತ್ರಿಗಳು ಹಠಕ್ಕೆ ಬೀಳದೆ ತಕ್ಷಣ ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರನ್ನು ಮಾತುಕತೆಗೆ ಕರೆದು ಈಗಿನ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version