ಬ್ಯಾಂಕ್‌ಗಳ ಖಾಸಗೀಕರಣ ಸರಕಾರದ ಬೇಜವಾಬ್ಧಾರಿತನ: ಅಖಿಲ ಭಾರತ ಬ್ಯಾಂಕ್ ಅಧಿಕಾರಿ ಸಂಘ

ಮಂಗಳೂರು, ಮಾ. 17:  ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳ ಖಾಸಗೀಕರಣವನ್ನು ವಿರೋಧಿಸಿ ದೇಶದಾದ್ಯಂತ ನಡೆದ ಎರಡು ದಿನಗಳ ಮುಷ್ಕರದಲ್ಲಿ ಮಂಗಳವಾರ ನಗರದ ಕೆನರಾ ಬ್ಯಾಂಕ್‌ ವೃತ್ತ ಕಚೇರಿ ಎದುರು ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ  ಪ್ರತಿಭಟನೆ ನಡೆಯಿತು.

ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘಟನೆಯ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್. ಭಟ್‌ ಮಾತನಾಡಿ, ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದೇ ಸಮುದಾಯದ ಅಭಿವೃದ್ಧಿಗಾಗಿ. ಈಗ ಬ್ಯಾಂಕ್‌ಗಳ  ಖಾಸಗೀಕರಣದಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಲಿದೆ. ಹಳ್ಳಿಗಾಡಿನಲ್ಲಿ ತೆರೆದಿರುವ ಬ್ಯಾಂಕ್‌ ಶಾಖೆಗಳು ಮುಚ್ಚಲಿವೆ. ಸರ್ಕಾರದ ಇಂತಹ ಕ್ರಮಗಳಿಂದ ದೇಶದ ಸಂಪತ್ತು ಖಾಸಗಿಯವರ ಕೈಗೆ ಹೋಗಲಿದೆ ಎ೦ಬ ಎಚ್ಚರಿಕೆಯ ಗಂಟೆ ಮೊಳಗಿಸಿದರು.

ನಂತರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕರಾದ ಎಚ್.ವಿ. ರಾವ್‌ವರು  ಮಾತನಾಡಿ, ನಮ್ಮ ಬದ್ಧತೆ ಏನಿದ್ದರೂ ಸಮಾಜಕ್ಕೆ. ಎಲ್ಲರೂ ಜೊತೆಯಾಗಿ ಇಂತಹ ಬೇಜವಾಬ್ದಾರಿ ಕ್ರಮಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.

1969 ಕ್ಕಿಂತ ಮೊದಲು ಇದ್ದ ಸ್ಥಿತಿಯನ್ನುಅವರು ವಿವರಿಸಿದರು, ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಲಾಗಿದ್ದು, ಬ್ಯಾಂಕ್‌ಗಳು ಜನರ ಬಳಿಗೆ ಬಂದವು. ಆಗಿನ ಜನಸಂಘವು ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ವಿರೋಧಿಸಿತ್ತು. ಇದೀಗ ಅದೇ ಕಾರ್ಯಸೂಚಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಸಿಐಟಿಯುನ ಸುನಿಲ್‌ಕುಮಾರ್ ಬಜಾಲ್‌ ಮಾತನಾಡಿ, ಸರ್ಕಾರದ ಸಂಪತ್ತನ್ನು ಖಾಸಗಿಯವರಿಗೆ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಅಗತ್ಯವಾಗಿದೆ. ದೇಶದ ಹೆಸರಾಂತ ರಾಷ್ಟ್ರೀಕೃತ ಬ್ಯಾಂಕ್‌ಗಳು ಆರಂಭವಾಗಿರುವ ಅವಿಭಜಿತ ಜಿಲ್ಲೆಯಿಂದಲೇ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಬಲವಾದ ಹೋರಾಟ ಮಾಡಲೇಬೇಕಾಗಿದೆ ಎಂದರು.

2ನೇ ದಿನದ ಮುಷ್ಕರದಲ್ಲಿ ಮಾತನಾಡಿದ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ವಿನ್ಸೆಂಟ್‌ ಡಿಸೋಜ ಮಾತನಾಡಿ, ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳ ಖಾಸಗೀಕರಣದಿಂದ ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರದ ಯೋಜನೆಗಳ ಜಾರಿಗೆಗೆ ತೊಡಕಾಗಲಿದೆ. ಸಾಲ ಸೌಲಭ್ಯ ಹಾಗೂ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಮರೀಚಿಕೆಯಾಗಬಹುದು ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ, ದೇಶದಲ್ಲಿ ರೈತರು ಹಾಗೂ ಬ್ಯಾಂಕ್‌ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ಸ್ವಾತಂತ್ರ್ಯ ಚಳವಳಿಯಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ತೊಂದರೆ ಅನುಭವಿಸುವಂತಾಗಲಿದೆ ಎಂದು ಹೇಳಿದರು.

ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ, ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘ, ಬ್ಯಾಂಕ್‌ ನೌಕರರ ರಾಷ್ಟ್ರೀಯ ಒಕ್ಕೂಟ, ಭಾರತೀಯ ಬ್ಯಾಂಕ್‌ ನೌಕರರ ಒಕ್ಕೂಟ, ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ ನೌಕರರ ಒಕ್ಕೂಟ, ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಗಳ ಕಾಂಗ್ರೆಸ್‌ ಸೇರಿದಂತೆ ಒಂಬತ್ತು ಸಂಘಟನೆಗಳ ಪ್ರತಿನಿಧಿಗಳು ಎರಡು ದಿನಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಖಾಸಗೀಕರಣದ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸಿದರು.

Exit mobile version