ವಿದ್ಯುತ್ ಪ್ರೀಪೇಯ್ಡ್‌ನತ್ತ ಸರ್ಕಾರ ಚಿತ್ತ; ಪ್ರೀಪೇಯ್ಡ್‌ ಯೋಜನೆಗೆ ವಿರೋಧ ಯಾಕೆ?

ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸರ್ಕಾರಿ ಕಂಪೆನಿಗಗಳನ್ನು ಖಾಸಗೀಕರಣಗೊಳಿಸಿದೆ. ಈಗ ಖಾಸಗೀಕರಣದ ಯೋಚನೆಯ ಅಂಗವಾಗಿ ಇನ್ನೊಂದು ಹೆಜ್ಜೆ ಇಟ್ಟಿದೆ. ಅದೇ ವಿದ್ಯುತ್‌ಚ್ಛಕ್ತಿ ಕಂಪೆನಿಗಳ ಖಾಸಗೀಕರಣ. ಇದರ ಭಾಗವಾಗಿ, ಸರ್ಕಾರ ವಿದ್ಯುತ್ ಪ್ರೀಪೇಯ್ಡ್ ಸ್ಮಾರ್ಟ ಮೀಟರ್ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ ಈ ಯೋಜನೆಯುಡಿ ರಾಜ್ಯದ ಎಲ್ಲಾ ಐದು ಎಸ್ಕಾಂ ವ್ಯಾಪ್ತಿಯಲ್ಲೂ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಈಗಾಗಲೇ ನಿರ್ದೇಶನ ನೀಡಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಜುಲೈ 22ರಂದು ಪತ್ರ ಬರೆದಿರುವ ಕೇಂದ್ರ ಇಂಧನ ಸಚಿವಾಲಯ, ಕೂಡಲೇ ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ಯೋಜನೆ ಸಿದ್ಧಪಡಿಸಿ ಡಿಸೆಂಬರ್  2023ರ ಒಳಗಾಗಿ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಬೇಕು ಎಂದು ಸ್ಪಷ್ಟಸೂಚನೆ ಕೂಡ ನೀಡಿದೆ.

ರಾಜ್ಯದಲ್ಲಿ 2023ರ ಡಿಸೆಂಬರ್ ಒಳಗಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿದರೆ ಶೇ.15ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು ಜೊತೆಗೆ ಪ್ರತಿ ಮೀಟರ್‌ಗೆ ಕನಿಷ್ಠ 900 ರೂಗಳ ಪ್ರೋತ್ಸಾಹ ಧನ ಕೂಡ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಜೊತೆಗೆ 2023ರ ಡಿಸೆಂಬರ್ ಒಳಗೆ ಎಲ್ಲಾ ಬ್ಲಾಕ್ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲಾಗುವುದು ಹಾಗೂ 2025ರ ಮಾರ್ಚ್ ಒಳಗೆ ದೇಶಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ ಎಂದು ವಿದ್ಯುತ್ ಸಚಿವಾಲಯ ಸ್ಪಷ್ಟಪಡಿಸಿದೆ.

ಏನಿದು ಪ್ರೀಪೇಯ್ಡ್ ಸ್ಮಾರ್ಟ ಮೀಟರ್ ?

 ವಿದ್ಯುತ್ ಪ್ರಿಪೇಯ್ಡ್ ಮೀಟರ್, ಪ್ರಿಪೇಯ್ಡ್ ಮೊಬೈಲ್ ನಂತೆಯೇ ಕಾರ್ಯ ನಿರ್ವಹಿಸುತ್ತದೆ. ನೀವು ರೀಚಾರ್ಜ್‌ ಮಾಡಿದಷ್ಟು ಹಣಕ್ಕೆ ನಿಮಗೆ ವಿದ್ಯುತ್ ನೀಡಲಾಗುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಪ್ರಮಾಣದ ವಿದ್ಯುತ್​ ಅಗತ್ಯವಿದೆ ಎಂಬ ಮಾಹಿತಿಯನ್ನು ವಿದ್ಯುತ್ ಸರಬರಾಜು ಮಾಡುವ ಕಂಪನಿಗಳಿಗೆ ನಿರ್ಧರಿಸುತ್ತವೆ. ಅದಕ್ಕೆ ತಕ್ಕಂತೆ ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಮಾಡಿಕೊಳ್ಳುತ್ತವೆ.

ಪ್ರೀಪೇಯ್ಡ್ ಮೀಟರ್‌ಹೇಗೆ ಕಾರ್ಯ ನಿರ್ವಹಿಸುತ್ತದೆ. ?

ಹೆಸರೇ ಹೇಳುವಂತೆ ಇದು ಮುಂಚಿತವಾಗಿ ಹಣವನ್ನು ಪಾವತಿಸುವ  ಪ್ರಕಿಯೆಯಾಗಿದ್ದು, ನಾವು ಎಷ್ಟು ಹಣ ಪಾವತಿಸುತ್ತೇವೆಯೋ ಅಷ್ಟು ವಿದ್ಯುತ್ತನ್ನು ವಿದ್ಯತ್ ಕಂಪನಿಗಳು ಸರಬರಾಜು ಮಾಡುವ ಪ್ರಕ್ರಿಯೆಯಾಗಿದೆ.

ಪ್ರೀಪೇಯ್ಡ್ ಮೀಟರ್‌ನ ಅನುಕೂಲಗಳು ಏನು ?

ಕೇಂದ್ರ ಸರ್ಕಾರ ಈ ನೂತನ ಯೋಜನೆಯನ್ನು ವಿದ್ಯುತ್ ನಷ್ಟ ತಡೆಗಟ್ಟಲು ಹಾಗೂ ಎಲ್ಲರಿಗೂ ವಿದ್ಯುತ್‌ ಸೌಲಭ್ಯ ಕಲ್ಪಿಸುವ ಸಲುವಾಗಿ ಮಾಡಿರುವುದಾಗಿ ಕೇಂದ್ರ ಹೇಳಿಕೊಂಡಿದೆ. ಇದಲ್ಲದೆ ಪ್ರಸ್ತುತ ಇರುವ ಯೊಜನೆ ಅನ್ವಯ ಕೆಲವು ಮಂದಿ ವಿದ್ಯುತ್ ಬಿಲ್ ಅನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದ್ದು ಇದರಿಂದಾಗಿ ವಿದ್ಯುತ್ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಆದ್ರೆ ಪ್ರೀಪೇಯ್ಡ್ ಯೋಜನೆಯಿಂದ ಇದಕ್ಕೆ ಕಡಿವಾಣ ಹಾಕಬಹುದಾಗಿದೆ. ಇದರ ಜೊತೆಗೆ ವಿದ್ಯುತ್ ಸರಬರಾಜು ಮಾಡುವ ನಿಗಮಗಳು ವಿದ್ಯುತ್ ಮೀಟರ್ ರೀಡಿಂಗ್ ಮಾಡವು ಕೆಲಸ ಕೂಡ ಕಡಿಮೆಯಾಗಲಿದ್ದು ಜೊತೆಗೆ ವಿದ್ಯುತ್ ಕಳ್ಳತನಕ್ಕೂ ಬ್ರೇಕ್ ಬೀಳಲಿದೆ.ಅಲ್ಲದೆ ಇದು ಗ್ರಾಹಕ ಸ್ನೇಹಿ ಯೋಜನೆಯಾಗಿದ್ದು, ಗ್ರಾಹಕರು ತಾವು ಇರುವ ಸ್ಥಳದಿಂದಲೇ ರೀಚಾರ್ಜ್ ಕೂಡ ಮಾಡಬಹುದು. ಇದರಿಂದ ಸಮಯವೂ ಉಳಿಯಲಿದೆ ಅನ್ನೋದು ಕೇಂದ್ರದ ಸಮರ್ಥನೆ. ಇದರ ಜೊತೆಗೆ ವಿದ್ಯುತ್ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಅಂತ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರೀಪೇಯ್ಡ್ ಮೀಟರ್‌ನ ಅನಾನೂಕೂಲಗಳೇನು?

ಪ್ರಸ್ತುತ ಯೋಜನೆಯಲ್ಲಿ 2-3 ತಿಂಗಳು ವಿದ್ಯುತ್ ದರ ಬಾಕಿ ಉಳಿಸಿಕೊಂಡರು ಕೂಡ ವಿದ್ಯತ್ ಸಂಪರ್ಕದಲ್ಲಿ ಯಾವುದೇ ಅಡೆತಡೆಗಳು ಉಂಟಾಗುತ್ತಿರಲಿಲ್ಲ. ಆದರೆ ಮುಂಬರುವ ಯೋಜನೆಯಿಂದ ಹಣ ಮುಗಿದ ತಕ್ಷಣ ವಿದ್ಯುತ್ ಸಂಪರ್ಕ ಕೂಡ ನಿಲ್ಲಿಸಲಾಗುತ್ತದೆ. ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಅನಕ್ಷರಸ್ತರಿಗೆ ಇದರ ಬಗ್ಗೆ ಅರಿವಿಲ್ಲದ ಕಾರಣ ರೀಚಾರ್ಜ್ ಮಾಡುವ ವಿಧಾನ ಕಷ್ಟ ಸಾಧ್ಯವಾಗಲಿದೆ. ಇದರ ಜೊತೆಗೆ ಕೃಷಿಗೆ, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಬೀದಿ ದೀಪ, ನೀರು ಸರಬರಾಜಿಗೆ ನೇರವಾಗಿ ನೀಡುತ್ತಿರುವ ಉಚಿತ ವಿದ್ಯುತ್‌ ಬಂದ್‌ ಆಗಲಿದೆ. ಮುಖ್ಯವಾಗಿ ರೈತರು ಇನ್ನು ಮುಂದೆ ತಾವು ಕೃಷಿಗೆ ಬಳಸುವ ವಿದ್ಯುತ್‌ಗೆ ಹಣ ಪಾವತಿಸಲೇ ಬೇಕಾಗುತ್ತೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಲಿದೆ.

ಒಟ್ಟಾರೆಯಾಗಿ ವಿದ್ಯುತ್ ಪ್ರೀಪೇಯ್ಡ್‌ ಸ್ಮಾರ್ಟ ಮೀಟರ್‌ ಯೋಜನೆ ವಿದ್ಯುತ್‌ಚ್ಛಕ್ತಿ ಕಂಪೆನಿಗಳ ಖಾಸಗೀಕರಣಕ್ಕೆ ಮುನ್ನುಡಿ. ಒಂದು ವೇಳೆ ವಿದ್ಯುತ್‌ ಸರಬರಾಜು ಕಂಪೆನಿಗಳನ್ನು ಖಾಸಗಿಯವರಿಗೆ ಒಪ್ಪಿಸಿದರೆ ಗ್ರಾಹಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಖಾಸಗಿಯವರ ತಾಳಕ್ಕೆ ತಕ್ಕಂತೆ ಗ್ರಾಹಕರು ಕುಣಿಯಬೇಕಾಗುತ್ತೆ ಅನ್ನೋದು ತಜ್ಞರ ವಿಶ್ಲೇಷಣೆ.

Exit mobile version