ಒಂಟಿಯಾಗಿ ಕಾಣಿಸುವ ಪಕ್ಷಿ(Bird) ಪ್ರಬೇಧಕ್ಕೆ ಸೇರಿರುವ ಗೂಬೆ(Owl) ಸಾಮಾನ್ಯ ಅಧ್ಯಯನಗಳಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಭಯ, ಕುತೂಹಲವನ್ನು ಕಾಯ್ದುಕೊಂಡಿರುವ ವಿಶಿಷ್ಟ ಪಕ್ಷಿ ಗೂಬೆ, ಇದು ಸ್ಟ್ರಿಜಿಫೋರ್ಮೀಸ್ ಕುಟುಂಬಕ್ಕೆ ಸೇರಿದೆ. ರಾತ್ರಿಯ ಹೊತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುವ ಜೀವಿಯಿದು. ಇಲಿ, ಹೆಗ್ಗಣ, ಕೀಟ, ಪಕ್ಷಿಗಳನ್ನು ಬೇಟೆಯಾಡಿ ತಿಂದು ಬದುಕುತ್ತದೆ. ಇದುವರೆಗೂ ವಿಶ್ವದಲ್ಲಿ ಸುಮಾರು 133 ಪ್ರಬೇಧಗಳ ಗೂಬೆಗಳು ಪತ್ತೆಯಾಗಿವೆ. ಕಣಜದ ಗೂಬೆ, ಕೊಂಬಿನ ಗೂಬೆ, ಮಂಜಿನಗೂಬೆ, ಮೀನು ತಿನ್ನುವ ಗೂಬೆ (ಬ್ರೌನ್ ಫಿಶ್ ಔಲ್), ಕುಬ್ಜಗೂಬೆ (ಪಿಗ್ಮಿ ಔಲ್) ಸದ್ಯಕ್ಕೆ ಹೆಚ್ಚಾಗಿ ಕಾಣಸಿಗುವ ಗೂಬೆ ವೈವಿಧ್ಯಗಳು.

ತಟ್ಟೆಯಂತೆ ಅಗಲವಾಗಿರುವ ಮುಖ, ದೊಡ್ಡ ಕಣ್ಣುಗಳು, ದಪ್ಪತಲೆ, ಮೋಟು ಕತ್ತು, ಮೃದುವಾದ ತುಪ್ಪಳದಂಥ ರೆಕ್ಕೆಪುಕ್ಕಗಳು, ಕೊಕ್ಕೆಯಂಥ ಕೊಕ್ಕು ಮತ್ತು ಬಲವಾದ ಕಾಲುಗಳು ಗೂಬೆಯ ದೇಹದ ವಿಶೇಷ ಲಕ್ಷಣಗಳು. ಅದೇ ರೀತಿ ಗೂಬೆಯು ತನ್ನ ಕತ್ತನ್ನು 360 ಡಿಗ್ರಿಯಷ್ಟು ತಿರುಗಿಸುತ್ತದೆ ಎನ್ನುವುದು ಅಚ್ಚರಿಯ ಸಂಗತಿ. ಹೆಚ್ಚು ಕಡಿಮೆ ಎಲ್ಲ ಬಗೆಯ ಪರಿಸರಗಳಿಗೂ ಇದು ಹೊಂದಿಕೊಂಡು ಬದುಕುತ್ತದೆ, ರಾತ್ರಿ ವೇಳೆಯಷ್ಟೇ ಆಹಾರ ಹುಡುಕಲು ಕಾರ್ಯಾಚರಣೆಗಿಳಿಯುವ ಗೂಬೆಗೆ ಹಗಲು ಕಣ್ಣು ಕಾಣಿಸುವುದಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ.
ಮರದ ಪೊಟರೆ, ಪ್ರಪಾತಗಳಲ್ಲಿನ ಸಂದುಗಳು, ನೆಲದ ಮೇಲಿನ ಗುಳಿಗಳು ಮುಂತಾದ ಸ್ವಾಭಾವಿಕ ನೆಲೆಗಳನ್ನು ಗೂಬೆಗಳು ಗೂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಕೆಲವು ಸಲ ಗಿಡುಗ ಇಲ್ಲವೆ ಕಾಗೆಗಳಿಂದ ತೊರೆಯಲ್ಪಟ್ಟ ಗೂಡುಗಳಲ್ಲಿಯೂ ಇವು ಸೇರಿಕೊಳ್ಳುವುದುಂಟು. ಹಳೆಯ ಮನೆ, ಚರ್ಚುಗಳ ಗೋಪುರಗಳು, ಕಣಜಗಳಲ್ಲಿನ ಚಾವಣಿ ಮುಂತಾದ ಸ್ಥಳಗಳಲ್ಲೂ ಗೂಡು ಕಟ್ಟುತ್ತವೆ. ಪಾಳುಬಿದ್ದ ಕಟ್ಟಡಗಳಂತೂ ಇದಕ್ಕೆ ಬಲು ಅಚ್ಚುಮೆಚ್ಚಿನ ಸ್ಥಳ.

ಇಂಥ ಸ್ಥಳಗಳಲ್ಲಿ ಗೂಡು ನಿರ್ಮಿಸಿಕೊಂಡು ಕರ್ಕಶವಾಗಿ ದೀರ್ಘವಾಗಿ ಕಿರುಚುತ್ತಾ, ಲೊಚಗುಟ್ಟುವಂತೆ, ಇಲ್ಲವೆ ಗೊರಕೆಯಂತೆ ಕೇಳಿಸುವ ಸದ್ದು ಮಾಡುತ್ತ ತಾನಿರುವ ಸ್ಥಳದ ಭೀಕರತೆಯನ್ನು ಹೆಚ್ಚಿಸುತ್ತದೆ.
ಭಾರತದ ಕೆಲವು ಭಾಗಗಳಲ್ಲಿ ಗೂಬೆಗಳನ್ನು ಅಪಶಕುನ ಎಂದರೆ, ಮತ್ತೆ ಕೆಲವೆಡೆ ಇದು ಶುಭವೆಂದು ಪರಿಗಣಿಸಲಾಗಿದೆ. ಇವು ಇಲಿ, ಹಾವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುವ ಪರಿಸರ ವ್ಯವಸ್ಥೆಯ ಒಂದು ಸೂಕ್ಷ್ಮ ಕೊಂಡಿಯೂ ಹೌದು. ಸಾಮಾನ್ಯವಾಗಿ ಒಂಟಿಯಾಗಿರುವ ಗೂಬೆಗಳು, ಕೆಲವೊಮ್ಮೆ ಗುಂಪಲ್ಲಿ ಕಾಣಸಿಗುತ್ತವೆ.
ಇಂತಹ ಗೂಬೆಗಳ ಗುಂಪನ್ನು “ಸಂಸತ್ತು” ಎಂದು ಕರೆಯಲಾಗುತ್ತದೆ. “ಗೂಬೆಗಳ ಪಾರ್ಲಿಮೆಂಟ್” ಎನ್ನುವುದು, ಯಾವುದಾದರೂ ಒಂದು ಪ್ರಮುಖ ವಿಷಯವನ್ನು ಪರಿಹರಿಸಲು ಗಂಭೀರ ಚರ್ಚೆಯಲ್ಲಿ ತೊಡಗಿರುವುದು ಎನ್ನುವುದನ್ನು ಸುಚಿಸುತ್ತದೆ. ಹೆಚ್ಚಾಗಿ ಗೂಬೆಗಳ ಪಾರ್ಲಿಮೆಂಟ್ ತಡರಾತ್ರಿಯಲ್ಲಿ ನಡೆಯುತ್ತದೆ.
- ಪವಿತ್ರ