ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಹಾರ್ದಿಕ್ ಪಟೇಲ್!

congress

ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ ಕಾಂಗ್ರೆಸ್‍ನ(Gujarat Congress) ಯುವ ಮುಖಂಡ ಮತ್ತು ರಾಹುಲ್ ಗಾಂಧಿ(Rahul Gandhi) ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಟೇಲ್(Hardik Patel) ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ(Resignation) ನೀಡಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, “ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ನಿರ್ಧಾರವನ್ನು ನನ್ನ ಹಿತೈಷಿಗಳು ಮತ್ತು ಗುಜರಾತ್ ರಾಜ್ಯದ ಜನರು ಬೆಂಬಲಿಸುತ್ತಾರೆ ಎಂದು ಭಾವಿಸುತ್ತೇನೆ. ನನ್ನ ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಗುಜರಾತ್‍ಗೆ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ನಂಬುತ್ತೇನೆ” ಎಂದು ಹೇಳಿದ್ದಾರೆ.

ಇನ್ನು ಕಳೆದ ಕೆಲ ದಿನಗಳಿಂದ ಗುಜರಾತ್ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಣ ರಾಜಕೀಯ ತೀವ್ರಗೊಂಡಿದೆ. ಈ ಕುರಿತು ಹಾರ್ದಿಕ್ ಪಟೇಲ್ ಅನೇಕ ಬಾರಿ ಕೇಂದ್ರ ವರಿಷ್ಠರಿಗೆ ಪತ್ರ ಬರೆದಿದ್ದರು. ಆದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ, ಹಾರ್ದಿಕ್ ಪಟೇಲ್ ಬರೆದ ಪತ್ರಕ್ಕೆ ಯಾವುದೇ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಕೇಂದ್ರ ವರಿಷ್ಠರ ಮೌನ ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಇಲ್ಲದಿರುವ ಕಾರಣದಿಂದ ಅಸಮಾಧಾನಗೊಂಡಿದ್ದ ಹಾರ್ದಿಕ್ ಪಟೇಲ್,

ಪಾಟಿದಾರ್ ಸಮುದಾಯದ ಪ್ರಬಲ ನಾಯಕರಾಗಿರುವ ನರೇಶ್ ಪಟೇಲ್ ಜೊತೆ ಸುದಿರ್ಘ ಮಾತುಕತೆ ನಡೆಸಿದ ಬಳಿಕ ರಾಜೀನಾಮೆ ಘೋಷಿಸಿದ್ದಾರೆ ಎನ್ನಲಾಗಿದೆ. ಇನ್ನು ಇದೇ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಕಾರಣದಿಂದ ಹಾರ್ದಿಕ್ ಪಟೇಲ್ ರಾಜೀನಾಮೆ ಕಾಂಗ್ರೆಸ್‍ಗೆ ಬಹುದೊಡ್ಡ ಹೊಡೆತ ನೀಡಲಿದೆ. ಇನ್ನು ಮೇ 15ರಿಂದ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೂ ಹಾರ್ದಿಕ್ ಪಟೇಲ್ ಭಾಗಿಯಾಗಿರಲಿಲ್ಲ.

ಗುಜರಾತ್‍ನಲ್ಲಿ ಪ್ರಬಲ ಸಮುದಾಯವಾಗಿರುವ ಪಾಟಿದಾರ್ ಸಮುದಾಯದ ಯುವ ನಾಯಕನಾಗಿರುವ ಹಾರ್ದಿಕ್ ಪಟೇಲ್, 2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

Exit mobile version