ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೀಗೆಹಟ್ಟಿಯ ಯುವಕ ಹರ್ಷನ ಬರ್ಬರ ಹತ್ಯೆ ಅತ್ಯಂತ ಖಂಡನೀಯ. ಈ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಅವರ ದುರುದ್ದೇಶವನ್ನು ತಕ್ಷಣ ಬಯಲು ಮಾಡಬೇಕು.
ಯಾಕಂದ್ರೆ ಈ ಒಂದು ದುರ್ಘಟನೆ ಸಮಾಜದ ಶಾಂತಿ ಕದಡುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಇದಕ್ಕೆ ಪೂರಕವಾಗಿ ರಾಜಕಾರಣಿಗಳ ಪ್ರಚೋದನಾಕಾರಿ ಹೇಳಿಕೆಗಳು, ಕೋಮು ದಳ್ಳುರಿ ಹೆಚ್ಚಿಸುವ ಕುತಂತ್ರಗಳು ನಡೀತಿವೆ. ಹಾಗಾಗಿ ನಮ್ಮ ರಾಜ್ಯದ ಗೃಹ ಇಲಾಖೆ ಅತ್ಯಂತ ಸೂಕ್ಷ್ಮವಾಗಿ ಈ ಘಟನೆಯನ್ನು ನಿರ್ವಹಿಸಬೇಕು.
ಸಾರ್ವಜನಿಕರು ಕೂಡ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಗಾಳಿ ಸುದ್ದಿ, ವಾಟ್ಸಪ್, ಫೇಸ್ಬುಕ್ ಸುದ್ದಿಗಳಿಗೆ ಕಿವಿಕೊಡದೆ ಸಮಾಜದಲ್ಲಿ ಶಾಂತಿ ಕಾಪಾಡಬೇಕಾಗಿದೆ.

ಇನ್ನು ಮಾಧ್ಯಮದವರೂ ಕೂಡ ಬಹಳ ಸಂಯಮದಿಂದ ವರ್ತಿಸಬೇಕು. ಉರಿಯೋ ಬೆಂಕಿಗೆ ತುಪ್ಪ ಸುರಿಯುವ ರೀತಿಯಲ್ಲಿ ವರದಿ ಮಾಡದೆ, ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಒಂದು ವೇಳೆ ಹದ್ದು ಮೀರಿ ವರ್ತಿಸಿದ್ರೆ ಅಂಥಾ ಮಾಧ್ಯಮಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಯಾಕಂದ್ರೆ ಇಲ್ಲಿ ಬೇರೆಯವರ ಚಿತೆಯ ಬೆಂಕಿಯಲ್ಲಿ ಮೈಕಾಯಿಸಿಕೊಳ್ಳುವ ರಾಜಕಾರಣಿಗಳ ಷಡ್ಯಂತ್ರ ಬಯಲಾಗಬೇಕಾಗಿದೆ. ಬಡ ಕಾರ್ಯಕರ್ತರನ್ನ ಮುಂದೆ ಬಿಟ್ಟು, ಅವರನ್ನು ಬಲಿಪೀಠಕ್ಕೆ ಬಲಿಕೊಟ್ಟು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ನಾಯಕರ ನಿಜ ಬಣ್ಣ ಬಯಲಾಗಬೇಕಿದೆ.
ಹರ್ಷ ಕೊಲೆಯಲ್ಲಿ ಯಾರ ಕೈವಾಡ ಇದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಒಂದಂತು ಸತ್ಯ ಈ ಕೊಲೆಯನ್ನೇ ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಸಿದ್ಧರಾಗಿದ್ದಾರೆ.

ಜನ ಭಾವನೆಗಳನ್ನು ಕೆರಳಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯ ಕೈವಾಡಗಳು ನೀರಿನ ಮೇಲೆ ತೇಲುವ ವಸ್ತುವಿನಂತೆ ಈಗ ಹಂತ ಹಂತವಾಗಿ ಅನಾವರಣವಾಗುತ್ತಿದೆ. ಈ ಹಿಂದೆಯೂ ಈ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯದಾಗ ಇಂಥ ಅಮಾಯಕ ಹುಡುಗರು, ಕಾರ್ಯಕರ್ತರನ್ನು ಬಲಿಕೊಟ್ಟಿದ್ದಾರೆ. ಅಮಾಯಕರನ್ನು ಬಲಿಕೊಟ್ಟು ಬಳಿಕ ಅದನ್ನೇ ಬಂಡವಾಳ ಮಾಡಿಕೊಂಡು, ತಾವು ಎಂಎಲ್ಎ, ಎಂಪಿ, ಮಂತ್ರಿಗಳಾಗಿ ಮೆರೆದಾಡಿ ಸಾವನ್ನಪ್ಪಿದವರಿಗೆ ನ್ಯಾಯ ಕೊಡುವ ಗೋಜಿಗೂ ಹೋಗದ ಉದಾಹರಣೆಗಳು ಸಾಕಷ್ಟು ಇವೆ. ಇಲ್ಲಿಯವರೆಗೂ ನಾವು ಕಂಡಿರುವ ಹಾಗೆ, ಧರ್ಮದ ಹೆಸರಿನಲ್ಲಿ ತಮ್ಮ ಜೀವವನ್ನು ಕಳೆದುಕೊಂಡವರು ಪರೇಶ್ ಮೆಸ್ತ್, ಶರತ್ ಮಡಿವಾಳ, ಶಿವು ಉಪ್ಪಾರ ಸದ್ಯ ಈಗ ಹರ್ಷ ಕೂಡ ಇದೇ ಸಾಲಿಗೆ ಸೇರಿಕೊಂಡಿದ್ದಾನೆ.

ಇಲ್ಲಿ ನಾವು- ನೀವೆಲ್ಲಾ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಧರ್ಮ ವಿಷಯವಾಗಿ ಸತ್ತವರು ಮಾತ್ರ ಸಾಮನ್ಯ ಕಾರ್ಯಕರ್ತರೇ ವಿನಃ ಯಾವೊಬ್ಬ ರಾಜಕಾರಣಿಯೂ ಅಲ್ಲ, ರಾಜಕಾರಣಿ ಮಕ್ಕಳು ಅಲ್ಲ! ಇಂಥ ದುರಂತದಲ್ಲಿ ಬಲಿಯಾಗೋದು ಮಾತ್ರ ಅಮಾಯಕ, ಮುಗ್ದ ,ಬಡವ ಕಾರ್ಯಕರ್ತರು. ಇದುವರೆಗೂ ಯಾವ ರಾಜಕಾರಣಿಗಳು, ರಾಜಕಾರಣಿ ಮಕ್ಕಳು ಅಥವಾ ಅವರ ಸಂಬಂಧಿಕರು ಸತ್ತಿರುವ ಸುದ್ದಿನೇ ಕೇಳಿಬಂದಿಲ್ಲ. ಆದರೆ ಈ ಕುತಂತ್ರಿ ರಾಜಕಾರಣಿಗಳು, ಸಮಯ ಸಾಧಕರಂತೆ ರೂಪಿಸುವ ಷಡ್ಯಂತ್ರಗಳು ಬಲಿಪಡೆಯುವುದು ಇಂಥ ಅಮಾಯಕರನ್ನೇ! ಧರ್ಮದ ಹೆಸರಿನಲ್ಲಿ ಕಾರ್ಯಕರ್ತರಿಗೆ ಮಾತ್ರ ಈ ಸಾವು, ನೋವು ರಾಜಕಾರಣಿಗಳಿಗೆ ಅಲ್ವಾ? ಜೈಕಾರ ಹಾಕುವುದಕ್ಕೆ ಇಂಥ ಯುವಕರು ಬೇಕು, ಹೂವಿನ ಹಾರ ಹಾಕಲು ಈ ಯುವಕರು ಬೇಕು. ಕೊನೆಗೆ ರಾಜಕಾರಣಿ ಸ್ವಾರ್ಥಕ್ಕೆ ಬಲಿಯಾಗಲೂ ಕೂಡ ಇಂಥಾ ಅಮಾಯಕ ಯುವಕರೇ ಬೇಕು.

ಆದ್ರೆ ಈ ಅಮಾಯಕರ ರಕ್ತದೋಕುಳಿ ನಡುವೆ ಅಧಿಕಾರದ ಗದ್ದುಗೇರಲು ಮಾತ್ರ ದೊಡ್ಡವರ, ದುಡ್ಡಿದ್ದವರ ಮಕ್ಕಳು. ಅಧಿಕಾರ ಅನುಭವಿಸಲು ರಾಜಕಾರಣಿಗಳು. ಇದು ಈ ಸಮಾಜದ ದುರಂತ. ತಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳಸಿದ ತಂದೆ ತಾಯಿ ಇಂದು ಕಂಗಾಲಾಗಿದ್ದಾರೆ. ಕಷ್ಟ ಕಾಲದಲ್ಲಿ ನಮ್ಮನ್ನು ಸಾಕಿ ಸಲುಹುತ್ತಾರೆ ಎಂಬ ಆಸೆ ಹೊತ್ತುಕೊಂಡಿದ್ದ ತಂದೆ-ತಾಯಿಗೆ ಇಂದು ಆಕಾಶವೇ ಕುಸಿದು ಬಿದ್ದಂತಾಗಿದೆ. ಈ ತಾಯಿ ತಂದೆ ನೋವನ್ನು ಕೇಳಲು ರಾಜಕಾರಣಿಗಳು ಬರ್ತಾರಾ? ಅವರ ಆರ್ಥಿಕ ಸಂಕಷ್ಟ ನಿವಾರಣೆಗೆ ಮುಂದಾಗ್ತಾರಾ ನಾಯಕರು? ರಾಜಕಾರಣಿಗಳು ಏನಿದ್ರೂ ಸಾವಿನ ಮನೆಯಲ್ಲಿ ಶೋ ಮಾಡಲು ಬರ್ತಾರೆ. ಸಂತಾಪ ಸೂಚಿಸ್ತಾರೆ. ಪ್ರಚೋದನಕಾರಿ ಹೇಳಿಕೆ ನೀಡಿ ಇನ್ನಷ್ಟು ಯುವಕರನ್ನು ಬಲಿಕಂಬಕ್ಕೇರಿಸಲು ರೆಡಿ ಮಾಡ್ತಾರೆ ಅಷ್ಟೇ. ಈ ಸತ್ಯ ನಮ್ಮ ಯುವಕರಿಗೆ ಅರ್ಥ ಆಗ್ಬೇಕು. ರಾಜಕೀಯ ನಾಯಕರ ಮಾತಿಗೆ ಮರುಳಾಗಿ ತಮ್ಮ ಜೀವವನ್ನು ಕಳೆದುಕೊಂಡಾಗ ಈ ಕರಾಳ ಸಂಗತಿಯನ್ನು ತಂದೆ ತಾಯಂದಿರು ಹೇಗೆ ಅರಗಿಸಿಕೊಳ್ಳುತ್ತಾರೆ ನೀವೇ ಹೇಳಿ?

ದುಷ್ಟ ರಾಜಕಾರಣಿಗಳ ಕುತಂತ್ರಕ್ಕೆ ದಾಳಗಳಾಗುತ್ತಿರೋದು ಬಡವರ, ಕೂಲಿ ಕಾರ್ಮಿಕರ ಜೀವವೇ ಹೊರೆತು ಬೇರೆ ಯಾರದ್ದು ಅಲ್ಲ. ರಾಜಕೀಯ ನಾಯಕರ ಈ ಕ್ರೂರ ಉದ್ದೇಶವನ್ನು ಇಂದಿನ ಯುವಕರು ಆದಷ್ಟು ಬೇಗ ಅರ್ಥೈಸಿಕೊಳ್ಳಬೇಕು. ಇದು ಅರ್ಥವಾಗದೇ ಇದ್ದರೇ ಇಂದು ಹರ್ಷನ ಹತ್ಯೆ, ನಾಳೆ ಮತ್ತೊಬ್ಬನದ್ದು ನಡೆದೇ ನಡೆಯುತ್ತದೆ. ಇಂಥಾ ಕ್ರೂರ ಕೊಲೆಗಳು, ಅಹಿತಕರ ಘಟನೆಗಳು ನಡೆಯದಂತೆ ಯುವಕರು ಮುಂಜಾಗ್ರತಾ ಕ್ರಮ ವಹಿಸಬೇಕು. ರಾಜಕಾರಣಿಗಳ ಮೋಸದಾಟ ಅರಿತುಕೊಳ್ಳಬೇಕು. ರಾಜಕಾರಣಿಗಳ ಕುತಂತ್ರಕ್ಕೆ ಬಲಿಯಾಗಬಾರದು. ಜೈಕಾರ ಹಾಕೋಕೆ, ಅಧಿಕಾರದ ಗದ್ದುಗಗೇರಲು ನಿವ್ಯಾಕೆ ಬಲಿಪೀಠಕ್ಕೆ ಏರುತ್ತೀರಿ. ಸಮಾಜದ ಏಳಿಗೆಗೆ ನಿಮ್ಮನ್ನು ತೊಡಗಿಸಿಕೊಳ್ಳಿ. ಭ್ರಷ್ಟಾಚಾರದ ವಿರುದ್ಧ ಹೋರಾಡಿ. ಅನ್ಯಾಯದ ವಿರುದ್ಧ ದನಿ ಎತ್ತಿ. ಗೋಸುಂಬೆ ರಾಜಕಾರಣಿಗಳ ಮುಖವಾಡ ಕಳಚಲು ಶ್ರಮಿಸಿ.