ಹರ್ಯಾಣ: ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ

ಹಿಸಾರ್, ಮೇ. 17: ಹರ್ಯಾಣದ ಹಿಸಾರ್ ನಲ್ಲಿ ಭಾನುವಾರ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು. ಹಿಸಾರ್‌ನ ಓಂ ಪ್ರಕಾಶ್ ಜಿಂದಾಲ್ ಮಾಡರ್ನ್ ಶಾಲೆಯ ಆವರಣದಲ್ಲಿ ಭಾನುವಾರ ಸ್ಥಾಪಿಸಲಾಗಿರುವ 500 ಹಾಸಿಗೆಗಳ ತಾತ್ಕಾಲಿಕ ಕೊವಿಡ್ ಆರೈಕೆ ಆಸ್ಪತ್ರೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಭೇಟಿಯನ್ನು ವಿರೋಧಿಸಿ ಸುಮಾರು 3,000 ಜನರು ಪ್ರತಿಭಟನೆ ನಿರತರಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಮುಂದುವರಿದ ಘರ್ಷಣೆಯಲ್ಲಿ ಡಿಎಸ್‌ಪಿ ಅಭಿಮನ್ಯು ಲೋಹನ್ ಮತ್ತು ಐವರು ಮಹಿಳಾ ಪೊಲೀಸರು ಸೇರಿದಂತೆ ಸುಮಾರು 50 ರೈತರು ಮತ್ತು 20 ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು 65 ರೈತರನ್ನು ವಶಕ್ಕೆ ಪಡೆದಿದ್ದಾರೆ.

ಲಾಂದ್ರಿ ಟೋಲ್ ಪ್ಲಾಜಾದಲ್ಲಿ 72 ಗ್ರಾಮಗಳ ಪಂಚಾಯಿತಿಗಳು, ಚೌಧರಿವಾಸ್ ಟೋಲ್ ಪ್ಲಾಜಾದಲ್ಲಿ 42 ಗ್ರಾಮಗಳು ಮತ್ತು ಬಡೋಪಟ್ಟಿ ಟೋಲ್ ಪ್ಲಾಜಾದ ಗ್ರಾಮಸ್ಥರು ಶನಿವಾರ ಮುಖ್ಯಮಂತ್ರಿಯನ್ನು ಹಿಸಾರ್ ಗೆ ಪ್ರವೇಶ ನೀಡಬಾರದು ಎಂದು ತೀರ್ಮಾನಿಸಿದ್ದರು. ಅವರು ಪ್ರತಿಭಟನೆಯನ್ನು ನಡೆಸಿ ಕಪ್ಪು ಧ್ವಜಗಳನ್ನು ಸಿಎಂಗೆ ತೋರಿಸಲು ನಿರ್ಧರಿಸಿದರು. ಹಿಸಾರ್ ಪೊಲೀಸರು ಭಾನುವಾರ ಬೆಳಿಗ್ಗೆ ನಗರದ ಅನೇಕ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಹಿಸಾರ್‌ನ ಕೈಗಾರಿಕಾ ಪ್ರದೇಶದತ್ತ ಸಾಗುತ್ತಿದ್ದ ರೈತರನ್ನು ಮೊದಲು ಜಿಂದಾಲ್ ಚೌಕ್‌ನಲ್ಲಿ, ನಂತರ ಸೆಕ್ಟರ್ 9-11ರ ಬಳಿ ಮತ್ತು ಕೈಗಾರಿಕಾ ಪ್ರದೇಶದ ಬಳಿ ತಡೆದಿದ್ದರು. ಆದರೆ, ರೈತರು ಬ್ಯಾರಿಕೇಡ್‌ಗಳನ್ನು ಮುರಿದು ಮುಖ್ಯಮಂತ್ರಿಯವರ ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಿದ್ದರು.

ಆಸ್ಪತ್ರೆಯ ಆವರಣಕ್ಕೆ ನುಗ್ಗುತ್ತಿದ್ದ ರೈತರನ್ನು ನಾವು ನಿಲ್ಲಿಸಿದಾಗ, ಅವರು ಕಲ್ಲುಗಳನ್ನು ಹೊಡೆಯಲು ಪ್ರಾರಂಭಿಸಿದರು. ಇದರಿಂದಾಗಿ ನಮ್ಮ ಪೊಲೀಸರಿಗೆ ಗಾಯಗಳಾಗಿವೆ. ಆದ್ದರಿಂದ, ಜನಸಮೂಹವನ್ನು ಚದುರಿಸಲು ಕೇವಲ ಲಾಠಿ ಪ್ರಹಾರ ಮಾಡಬೇಕಾಯಿತು ಮತ್ತು ಅಶ್ರುವಾಯು ಪ್ರಯೋಗ ಮಾಡಬೇಕಾಗಿ ಬಂತು ಎಂದು ಹರ್ಯಾಣ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

Exit mobile version