ಪತಿಯ ಪ್ರಾಣ ಉಳಿಸಿಕೊಳ್ಳಲು ಮ್ಯಾರಥಾನ್ ಓಡಿ, ಹಣ ಗೆದ್ದ 65 ವಯಸ್ಸಿನ ‘ಲತಾ ಖರೆ’

Lata Kare

ಗಂಡನ ಪ್ರಾಣವನ್ನು ಉಳಿಸಿಕೊಳ್ಳಲು ಯಮಧರ್ಮರಾಯನನ್ನೇ ಎದಿರು ಹಾಕಿಕೊಂಡ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಪುರಾಣಗಳಲ್ಲಿ ಕೇಳಿದ್ದೇವೆ.

ಆದರೆ ಈಗಿನ ಕಾಲದಲ್ಲಿಯೂ ತನ್ನ ಗಂಡನ ಆರೋಗ್ಯದ ಸಲುವಾಗಿ ತನ್ನ ವಯಸ್ಸನ್ನು ಕೂಡ ಲೆಕ್ಕಿಸದೆ,ತನ್ನ ಗಂಡನ ಜೀವನವನ್ನು ಉಳಿಸಿಕೊಂಡ ಶ್ರೀಮತಿ ಲತಾ ಭಗವಾನ್ ಖರೆಯ(Lata Bhagwan Kare) ಸಾಹಸಗಾಥೆಯು ಇಂದಿನ ಯುವಜನತೆಗೆ ಮಾದರಿಯಾಗಿದೆ.

ಲತಾ ಖರೆ ಅವರ ಸಾಧನೆಯ ಕಥೆ ಹೀಗಿದೆ ನೋಡಿ. 2013 ರಲ್ಲಿ ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಸಣ್ಣ ಗ್ರಾಮವೊಂದರಲ್ಲಿ 68 ವರ್ಷದ ಭಗವಾನ್ ಖರೆ ಮತ್ತು ಮತ್ತು 67 ವರ್ಷದ ಆತನ ಹೆಂಡತಿ ಲತಾ ಖರೆ ವಾಸಿಸುತ್ತಿದ್ದರು.

ಭಗವಾನ್ ಖರೆ ಅನೇಕ ವರ್ಷಗಳ ಕಾಲ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿ ನಿವೃತ್ತಿಯಾದ ನಂತರ ಗಂಡ ಮತ್ತು ಹೆಂಡತಿಯರಿಬ್ಬರೂ ಅದೇ ಊರಿನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬಡವರಿಗೆ ಹಲವಾರು ಕಷ್ಟ ಎಂಬ ಮಾತಿನಂತೆ, ಒಮ್ಮೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಭಗವಾನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ ಗಾಬರಿಗೊಂಡ ಲತಾ,

ನೆರೆಹೊರೆಯವರ ಸಹಾಯದಿಂದ ಭಗವಾನ್ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಖರೆಯವರನ್ನು ಪರೀಕ್ಷಿಸಿದ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಈ ಸೋಂಕಿಗೆ ಚಿಕಿತ್ಸೆ ನೀಡಲು ಸೌಲಭ್ಯವಿಲ್ಲದ ಕಾರಣ ನಗರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಾಗ, ಲತಾ ಖರೆ ಅಕ್ಕ ಪಕ್ಕದವರನ್ನು ಮತ್ತು ಸಂಬಂಧಿಕರನ್ನು ಕಾಡಿ ಬೇಡಿ ಒಂದಷ್ಟು ಹಣವನ್ನು ಸಾಲ ಮಾಡಿ ಸಮೀಪದ ಬಾರಾಮತಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಭಗವಾನ್ ಖರೆಯನ್ನು ದಾಖಲಿಸುತ್ತಾರೆ.

ಖಾಸಗಿ ಆಸ್ಪತ್ರೆ ಎಂದ ಮೇಲೆ ಕೇಳಬೇಕೇ? ವೈದ್ಯರು ನಾನಾ ರೀತಿಯ ಪರೀಕ್ಷೆಗಳನ್ನು ಮಾಡಿದ ನಂತರ, “ಈ ಸೋಂಕಿನ ಚಿಕಿತ್ಸೆಗಾಗಿ ಬಹಳ ಖರ್ಚಾಗುತ್ತದೆ. ಹಾಗಾಗಿ ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಉಳಿದದ್ದನ್ನು ಭಗವಂತನ ಮೇಲೆ ಬಿಡೋಣ” ಎಂದು ಕಡ್ಡಿ ತುಂಡಾದಂತೆ ಹೇಳಿದಾಗ ಲತಾ ಖರೆಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು, ಯಾರನ್ನು ಕೇಳುವುದು ಎಂದು ಯೋಚಿಸುತ್ತಿರುವಾಗ ಬಾರಾಮತಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮ್ಯಾರಥಾನ್ ಓಟದ ಸ್ಪರ್ಧೆ ಹಮ್ಮಿಕೊಂಡಿದ್ದು,

ಗೆದ್ದವರಿಗೆ ನಗದು ಬಹುಮಾನವನ್ನು ಕೊಡುತ್ತಾರೆ ಎಂಬ ವಿಷಯ ತಿಳಿಯುತ್ತದೆ. ಎಂದೂ ಓಡಿ ಅಭ್ಯಾಸವೇ ಇಲ್ಲದ ಲತಾ ಖರೆ, ಆ ದಿನ ಮ್ಯಾರಥಾನ್ ನಲ್ಲಿ ಭಾಗವಹಿಸಲು ನಿರ್ಧರಿಸುತ್ತಾರೆ. ಸ್ಪರ್ಧೆ ನಡೆಯುವ ಸ್ಥಳಕ್ಕೆ ಹೋದಾಗ, ಮರಾಠೀ ಹೆಂಗಸರಂತೆ ಕೈ ಮಗ್ಗದ ಸೀರೆಯನ್ನು ಕಚ್ಚೆಯಂತೆ ಉಟ್ಟುಕೊಂಡು ಬರೀ ಗಾಲಿನಲ್ಲಿ ಬಂದಿದ್ದ ಲತಾರನ್ನು ನೋಡಿದ ಸ್ಪರ್ಧೆಯ ಆಯೋಜಕರು ವಯೋಮಿತಿಯ ನೆಪವೊಡ್ಡಿ ಆಕೆಯನ್ನು ಸ್ಪರ್ಧೆಯಲ್ಲಿ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆದರೆ ಲತಾ ಖರೆ ತನ್ನ ಪರಿಸ್ಥಿತಿಯನ್ನು ತಿಳಿಸಿ, ಕಣ್ಣೀರು ಸುರಿಸಿ, ಆಯೋಜಕರ ಕಾಲಿಗೆ ಬೀಳಲು ಹೋದಾಗ,

ಆಕೆಯ ಶ್ರದ್ಧೆ ಮತ್ತು ಆಸಕ್ತಿಯನ್ನು ಗಮನಿಸಿ ಸ್ಪರ್ಧೆಯ ವಯೋಮಾನದ ನಿಯಮಗಳನ್ನು ಮೀರಿ ಆಕೆಗೊಂದು ಅವಕಾಶವನ್ನು ನೀಡಲು ಒಪ್ಪಿ, ಆಕೆಯ ಹೆಸರನ್ನು ಸ್ಪರ್ಧೆಗೆ ನೊಂದಾಯಿಸಿಕೊಂಡರು. ಮ್ಯಾರಥಾನ್ ಓಟಕ್ಕೆ ಭರ್ಜರಿಯಾಗಿ ತಯಾರಾಗಿ ಬಂದಿದ್ದ ನೂರಾರು ಜನ ಮೂರು ಕಿಲೋ ಮೀಟರ್ ಒಡಲು ಸಿದ್ಧವಾಗಿದ್ದರು.

ಲತಾ ಅಜ್ಜಿ ಜೀವಮಾನದಲ್ಲೆಂದೂ ಅಷ್ಟು ದೂರ ಓಡಿರಲೇ ಇಲ್ಲ. ಆದರೆ ಪರಿಸ್ಥಿತಿ ಆಕೆಯನ್ನು ಓಡುವಂತೆ ಮಾಡಿತ್ತು. ಭಗವಂತನನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಳ್ಳುತ್ತಾ, ಸೆರಗನ್ನು ತಲೆಗೆ ಸುತ್ತಿಕೊಂಡು ಬರೀ ಕಾಲಿನಲ್ಲಿ ಓಡಲು ಆರಂಭಿಸಿಯೇ ಬಿಟ್ಟರು.

ಬಿಸಿಲಿನ ಝಳಕ್ಕೆ ಕಾಲು ಸುಡುತ್ತಿದ್ದರೂ ಆಕೆಗೆ ಲಕ್ಷ್ಯವಿರಲಿಲ್ಲ. ಈ ಇಳೀ ವಯಸ್ಸಿನಲ್ಲಿಯೂ 16ರ ಯುವತಿಯಂತೆ ಉತ್ಸಾಹದಿಂದ ಆಕೆ ಓಡುತ್ತಿದ್ದನ್ನು ರಸ್ತೆಯ ಬದಿಯಲ್ಲಿ ನಿಂತು ನೋಡುತ್ತಿದ್ದ ಸಾವಿರಾರು ಮಂದಿ ಬೆರಗಾಗಿ ನೋಡಿದ್ದಲ್ಲದೇ ಜೈಕಾರ ಹಾಕುತ್ತಾ ಚಪ್ಪಾಳೆ ಹೊಡೆಯುತ್ತಾ ಅಜ್ಜಿಯನ್ನು ಪ್ರೋತ್ಸಾಹಿಸತೊಡಗಿದರು. ಇದರ ಜೊತೆಯಲ್ಲಿ ಆಕೆಯೊಂದಿಗೆ ಓಡುತ್ತಿದ್ದವರೂ ಸಹ ಆಕೆಗೆ ದಾರಿ ಮಾಡಿಕೊಟ್ಟರು. ಅವರೆಲ್ಲರ ಜೈಕಾರದ ಫಲವೋ, ಭಗವಂತನ ಅನುಗ್ರಹವೋ, ಒಟ್ಟಿನಲ್ಲಿ ಆಕೆ ತನ್ನ ಛಲದಿಂದ ಓಟದ ಸ್ಪರ್ಧೆಯಲ್ಲಿ ವಿಜೇತಳಾದಾಗ ಸ್ವರ್ಗಕ್ಕೆ ಮೂರೇ ಗೇಣು ಉಳಿದಿತ್ತು. ಸ್ಪರ್ಧೆಯಲ್ಲಿ ವಿಜೇತಳಾದ ಲತಾಗೆ 5000 ರೂ ನಗದು ಬಹುಮಾನ ದೊರೆಯಿತು.

ಅದೇ ರೀತಿ, ಲತಾರ ಕಷ್ಟವನ್ನು ನೋಡಿದ ಅನೇಕ ಜನರು, ಆಕೆಯ ಪತಿಯ ವೈದ್ಯಕೀಯ ಸಹಾಯಕ್ಕಾಗಿ ಮುಂದೆ ಬಂದರು. ಇದರಿಂದ ಭಗವಾನ್ ಖರೆಯವರಿಗೆ ಸೂಕ್ತ ಚಿಕಿತ್ಸೆ ದೊರೆತು ಕೆಲವೇ ಕೆಲವು ದಿನಗಳಲ್ಲಿ ಗುಣಮುಖರಾಗಿ ಮನೆಗೆ ಹಿಂದಿರುಗಿದರು. ಹೀಗೆ ಲತಾ ಭಗವಾನ್ ಖರೆಯವರು ಛಲದಿಂದ ತನ್ನ ಗಂಡನ ಪ್ರಾಣ ಉಳಿಸಿಕೊಂಡು ಕಲಿಯುಗದ ಸಾವಿತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
Exit mobile version