ಮಲಹೊರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾಕೆ ಯಾವುದೇ ಶಿಕ್ಷೆ ಆಗುತ್ತಿಲ್ಲ: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಮಲಹೊರುವ ಪದ್ಧತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ (Karnataka) ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಶಿಕ್ಷೆ ಕೂಡ ವಿಧಿಸುವಲ್ಲಿ ಏಕೆ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ..

ಮಲಹೊರುವ ಉಲ್ಲಂಘನೆ ಪ್ರಕರಣದಲ್ಲಿ ಅಧಿಕಾರಿಗಳು ಪರಿಶಿಷ್ಟ ಜಾತಿ (Scheduled Caste) ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ 1989ಅಡಿ ಪ್ರಕರಣವನ್ನು ದಾಖಲಿಸುವುದಿಲ್ಲ ಅಥವಾ ನಿಬಂಧನಗಳಡಿಯಲ್ಲಿ ಪ್ರಕರಣ ದಾಖಲಿಸಿದರೂ ಅದರಡಿಯಲ್ಲಿ ಶಿಕ್ಷೆಯಾಗುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗಮನಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯನ್ನು ಸಾಮಾನ್ಯವಾಗಿ ಮ್ಯಾನುಯಲ್ ಸ್ಕ್ಯಾವೆಂಜರ್‌ ((Manual Scavenging) ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದಾಖಲು ಮಾಡಲಾಗುತ್ತಿಲ್ಲ ಎಂದು ಹೈಕೋರ್ಟ್‌ ಕಂಡುಕೊಂಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಜಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿ ಹೈಕೋರ್ಟ್ (Highcourt) ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದ್ದು, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ (Krishna S Dixit) ಅವರ ಪೀಠವು ಕರ್ನಾಟಕದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ.

ವಕೀಲರಾದ ಶ್ರೀಧರ್ ಪ್ರಭು (Shreedhar Prabhu), ವಿಚಾರಣೆ ವೇಳೆ ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯನ್ನು ಕಡ್ಡಾಯವಾಗಿ ಅನ್ವಯಿಸಬೇಕು ಎಂದು ಹೇಳಿದ್ದು, ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ-2013ರಡಿ ಪ್ರಕರಣ ದಾಖಲಿಸಿದರೂ, ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನ್ಯಾಯಾಲಯವು ಗಮನಿಸಿದೆ.

ಪ್ರಾಸಿಕ್ಯೂಷನ್ (Prosecution) ಮತ್ತು ಸರ್ಕಾರಿ ವಕೀಲರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಇದು ಸಾಧ್ಯವಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ. ಮಲಹೊರುವ ಕಾಯಿದೆ ಉಲ್ಲಂಘನೆ ಪ್ರಕರಣದಲ್ಲಿ ಒಬ್ಬರಿಗೆ ಕೂಡ ಶಿಕ್ಷೆಯಾಗಿಲ್ಲ. ಎಂತಹ ನ್ಯಾಯದ ಅಪಹಾಸ್ಯ, ಒಂದೇ ಒಂದು ಶಿಕ್ಷೆಯೂ ಏಕೆ ಆಗಿಲ್ಲ? ನಿಮ್ಮ ಚೌಕಟ್ಟು ಏನು? ಎಂದು ಕೋರ್ಟ್‌ ಸರ್ಕಾರವನ್ನು ಕೇಳಿದೆ.

ಸಾವಿರಾರು ಪೌರಕಾರ್ಮಿಕರು ಈ ಕೆಲಸ ಮಾಡುವಾಗ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಪ್ರಾಣ ಬಿಟ್ಟಿದ್ದಾರೆ. ಇದರಿಂದಾಗಿ ಯಾರೇ ಅಧಿಕಾರಗಳು, ಸೂಪರ್‌ವೈಸರ್‌ಗಳು (Supervisor), ಪೌರಕಾರ್ಮಿಕರಿಂದ, ಕೂಲಿ ಕಾರ್ಮಿಕರಿಂದ ಈ ಕೆಲಸ ಮಾಡಿಸಬಾರದೆಂದು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

ಯಾವುದೇ ವ್ಯಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ನ (Septic Tank) ಶುಚಿಗೊಳಿಸುವಿಕೆಗಾಗಿ ಬಳಸಿಕೊಳ್ಳಬಾರದು ಎಂದು 2013ರ ಮ್ಯಾನುವಲ್ ಸ್ಕ್ಯಾವೆಂಜಿಂಗ್‌ ಆಕ್ಟ್‌ ಸ್ಪಷ್ಟಪಡಿಸಿದೆ. ಇದಕ್ಕಾಗಿ ಯಂತ್ರಗಳನ್ನು ಮಾತ್ರವೇ ಬಳಸಬೇಕೆಂದು ಸೂಚಿಸಿದೆ. ಆದರೆ ಇದೀಗ ಈ ಕುರಿತ ಪ್ರಕರಣ ದಾಖಲಾದರೂ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಕಾನೂನಿನ ನಿಷ್ಕ್ರಿಯತೆಯನ್ನು ಸೂಚಿಸುತ್ತದೆ.

ಭವ್ಯಶ್ರೀ ಆರ್ ಜೆ

Exit mobile version