ನಾವೆಲ್ಲರೂ ಸೇರಿ ನಮ್ಮ ಮಕ್ಕಳಲ್ಲಿ ಸಾತ್ವಿಕ ಮನೋಭಾವವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ. ಕರ್ನಾಟಕ ಸರ್ವ ಜನಾಂಗಗಳ ಶಾಂತಿಯ ತೋಟ ಎಂದು ಜೆಡಿಎಸ್ ನಾಯಕ(JDS Leader)ಎಚ್.ಡಿ. ಕುಮಾರಸ್ವಾಮಿಯವರು(HD Kumarswamy) ಟ್ವೀಟ್(Tweet) ಮಾಡಿದ್ದಾರೆ.

ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, “ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸುಪ್ರಭಾತ ಕೇಳಿಸುವುದು, ಮಸೀದಿಗಳಲ್ಲಿ ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಸಿಕೊಂಡೆ ಬೆಳೆದಿದ್ದೇನೆ. ನಮ್ಮ ಊರಿನಲ್ಲಿ ನಿತ್ಯವೂ ನಾನು ಕೇಳುತ್ತಿದ್ದ ಸದ್ದುಗಳಾಗಿದ್ದವು ಇವು. ಅಲ್ಲದೆ, ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಇಲ್ಲವಲ್ಲ.
ಅಷ್ಟೇ ಅಲ್ಲ, ಸಂಜೆಯಾದರೆ ಇಡೀ ಊರಿನ ಜನರೆಲ್ಲ ಗುಡಿಯಲ್ಲಿ ಸೇರಿ ಭಜನೆ ಮಾಡುತ್ತಿದ್ದದ್ದು, ಕರತಾಳ ಹಿಡಿದು ರಾತ್ರಿ ಹತ್ತು ಗಂಟೆವರೆಗೂ ಭಗವಂತನ ಭಜನೆಯಲ್ಲಿ ಲೀನವಾಗುತ್ತಿದ್ದ ದಿನಗಳು ಇನ್ನೂ ನನ್ನ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿವೆ. ನಾನೂ ಬಹಳ ಶ್ರದ್ಧೆಯಿಂದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಇನ್ನು ಹಿಂದುಗಳಾದ ನಾವು ನಮ್ಮ ದೇವರಿಗೆ ಭಕ್ತಿಯಿಂದ ಸಲ್ಲಿಸುವ ಸೇವೆಗಳಿಗೆ ಮುಸ್ಲೀಮರು ಸೇರಿ ಅನ್ಯ ಧರ್ಮದ ಯಾರಿಂದಲೂ ಆಕ್ಷೇಪ ಇಲ್ಲದಿರುವಾಗ ಮಸೀದಿಗಳ ಧ್ವನಿ ವರ್ಧಕಗಳ ಬಗ್ಗೆ ತಕರಾರು ತೆಗೆಯುವುದು ಏಕೆ? ಅಗತ್ಯವಿದ್ದರೆ, ಶಬ್ದದ ಪ್ರಮಾಣವನ್ನು ವೈಜ್ಞಾನಿಕವಾಗಿ ಚಿಂತಿಸಿ ಕಡಿಮೆ ಮಾಡಲಿ.
ಆ ಬಗ್ಗೆ ಮುಸ್ಲಿಂ ಧರ್ಮಗುರುಗಳೂ ಆಲೋಚನೆ ಮಾಡಲಿ. ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ-ಇಂದಿನದಲ್ಲ. ಅನಾದಿ ಕಾಲದಿಂದಲೂ, ಧರ್ಮಗಳು ಹುಟ್ಟಿದಾಗಿನಿಂದಲೂ ನಡೆದುಕೊಂಡೇ ಬಂದಿವೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ಶಿರಬಾಗಿ ನಮಿಸಿದ್ದಾರೆ. ಮೋದಿಯವರ ಆಶಯವನ್ನು ಹಿಂದೂ ಸಂಘಟನೆಗಳು ಅರ್ಥಮಾಡಿಕೊಳ್ಳಬೇಕು. ಜಗತ್ತಿನಲ್ಲೇ ಶ್ರೇಷ್ಠವಾದ ಸಂವಿಧಾನವನ್ನು ನಾವು ಹೊಂದಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಪರೋಕ್ಷವಾಗಿ ಬಿಜೆಪಿಗೆ ಕುಟುಕಿದ್ದಾರೆ.