ದೇಹದ ತೂಕ ಇಳಿಕೆಗೆ ರಾಮಬಾಣ ಈ ಕಾಮಕಸ್ತೂರಿ ಬೀಜ

Basil seeds

ಕಾಮಕಸ್ತೂರಿ ಬೀಜದ(Basil Seeds) ಬಗ್ಗೆ ನೀವು ಕೇಳಿಯೇ ಇರ್ತಿರಿ. ಇದನ್ನು ಬೇಸಿಗೆಯಲ್ಲಿ ನೀರಿಗೆ ಹಾಕಿ ಕುಡಿದರೆ ಶರೀರಕ್ಕೆ ತುಂಬಾ ತಂಪು, ಇನ್ನು ಫಲೂಡಾ, ಐಸ್‌ ಕ್ರೀಮ್‌ಗೆ ಹಾಕಿ ಕೂಡ ಕುಡಿಯಲಾಗುವುದು. ಇನ್ನು ಮಲಬದ್ಧತೆಯ ಸಮಸ್ಯೆ ಇರುವವರು ಇದನ್ನು ನೀರಿಗೆ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದನ್ನು ಸಬ್ಜಾ ಎಂದು ಕೂಡ ಕರೆಯುತ್ತಾರೆ. ಈ ಕಾಮಕಸ್ತೂರಿ ತೂಕ ಇಳಿಕೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.


ಈ ಬೀಜದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್, ಅಧಿಕ ಪ್ರೊಟೀನ್ ಇರುತ್ತದೆ. ಈ ರೀತಿಯ ಕಾಂಬಿನೇಷನ್‌ನ ಸಸ್ಯಾಹಾರ ಬಹಳ ಅಪರೂಪ. ಆದ್ದರಿಂದ ಇದನ್ನು ಆಹಾರ ಕ್ರಮದಲ್ಲಿ ಸೇರಿಸುವುದು ಬಹಳ ಆರೋಗ್ಯಕರ. ಕಾಮ ಕಸ್ತೂರಿ ಬೀಜದಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಕೊಬ್ಬಿನಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎರಡು ಚಮಚ ಸಬ್ಜಾವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಎರಡು ಚಮಚ ಸಬ್ಜಾದಲ್ಲಿ 40 ಕ್ಯಾಲೋರಿ ಇದ್ದು, 11 ಗ್ರಾಂ ಪ್ರೊಟೀನ್, 5 ಗ್ರಾಂ ಕಾರ್ಬೋಹೈಡ್ರೇಟ್ಸ್, 2 ಗ್ರಾಂ ನಾರಿನಂಶವಿರುವುದರಿಂದ ತೂಕ ಇಳಿಕೆಗೆ ಬಹಳ ಪರಿಣಾಮಕಾರಿಯಾಗಿದೆ.

ಇದನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮೈಯ್ಯಲ್ಲಿನ ಬೊಜ್ಜು ಕರಗುತ್ತದೆ. ಹಾಗೇ, ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗಂಟಲು ಬೇನೆ ಇರುವವರು ಕಾಮಕಸ್ತೂರಿ ಎಲೆಗಳ ರಸವನ್ನು ಹಿಂಡಿ ಅದನ್ನು ಬಟ್ಟೆಯಲ್ಲಿ ಸೋಸಿ ಜೇನು ತುಪ್ಪ ಬೆರೆಸಿ ತಿಂದರೆ ನೋವು ಕಡಿಮೆಯಾಗುವುದು. ಅಲ್ಲದೆ ಇದರ ಎಲೆಯಲ್ಲಿ ಕಷಾಯ ಮಾಡಿ ಕುಡಿದರೆ ಶೀತ ಮತ್ತು ಜ್ವರ ಕೂಡ ಕಡಿಮೆಯಾಗುವುದು. ಬೇಸಿಗೆಯ ಶಾಖ ನಿಯಂತ್ರಿಸುವಲ್ಲಿ ಕೂಡ ಇದು ಬಹಳ ಸಹಕಾರಿಯಾಗಿದೆ.

ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಚಯಾಪಚಯ ಕ್ರಿಯೆ ನಿಧಾನಗೊಳಿಸುವುದರಿಂದ ಇದು ಕಾರ್ಬೋಹೈಡ್ರೇಟ್ಸ್ ಗ್ಲೂಕೋಸ್‌ ಆಗಿ ಪರಿವರ್ತನೆಯಾಗುವುದನ್ನು ನಿಯಂತ್ರಿಸುತ್ತದೆ. ಆದ್ದರಿಂದ ಟೈಪ್‌ 2 ಮಧುಮೇಹಿಗಳು ಇದನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

Exit mobile version