ಅಸ್ಸಾಂನಲ್ಲಿ(Assam) ಶುಕ್ರವಾರ ನಿರಂತರ ಮಳೆಯಿಂದಾಗಿ ಪ್ರವಾಹ(Flood) ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ರಾಜ್ಯದ 28 ಜಿಲ್ಲೆಗಳಾದ್ಯಂತ 2,930 ಗ್ರಾಮಗಳ ಸುಮಾರು 19 ಲಕ್ಷ ಜನರ ಮೇಲೆ ವಿಪತ್ತು(Disaster) ತೀವ್ರ ಪರಿಣಾಮ ಬೀರಿದೆ. ಪ್ರಸಕ್ತ ವರ್ಷ ಪ್ರವಾಹದಲ್ಲಿ ಒಟ್ಟು 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ವರದಿ.

ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ದಿಮಾ-ಹಸಾವೊ, ಗೋಲ್‌ಪಾರಾ, ಹೋಜೈ, ಕಾಮ್ರೂಪ್, ಕಮ್ರೂಪ್ (ಎಂ), ಕರ್ಬಿ ಅಂಗ್ಲಾಂಗ್ ವೆಸ್ಟ್, ಕೊಕ್ರಜಾರ್‌ಹಾರ್ ಪ್ರವಾಹದಿಂದ ಪೀಡಿತವಾಗಿರುವ 28 ಜಿಲ್ಲೆಗಳು , ಲಖಿಂಪುರ, ಮಜುಲಿ, ಮೊರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್‌ಪುರ್, ಸೌತ್ ಸಲ್ಮಾರಾ, ತಮುಲ್‌ಪುರ್, ತಿನ್‌ಸುಕಿಯಾ ಮತ್ತು ಉದಲ್‌ಗುರಿ.
ಧಾರಕಾರ ಮಳೆಯಿಂದ ಗ್ರಾಮಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಪ್ರವಾಹದ ನೀರು ಅಪಾಯ ಮಟ್ಟ ಮೀರಿದ್ದು, ಪ್ರತಿ ಗಂಟೆಗೆ ನೀರಿನ ಮಟ್ಟ ಏರುತ್ತಿದೆ. ನನ್ನ ಮನೆ ಸಂಪೂರ್ಣವಾಗಿ ಮುಳುಗಿದೆ ಮತ್ತು ನಾವು ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದೇವೆ ಎಂದು ನಲ್ಬರಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಸ್ಥ ಪ್ರಮೋದ್ ಬರ್ಮನ್ ತಮ್ಮ ಅಳಲಿ ತೋಡಿಕೊಂಡಿದ್ದಾರೆ. ಬಜಾಲಿಯು ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಒಟ್ಟು 3.55 ಲಕ್ಷ ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದಾರೆ, ನಂತರದ ಸ್ಥಾನದಲ್ಲಿ ದರ್ರಾಂಗ್ ನಲ್ಲಿ, 2.90 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ.

ಒಟ್ಟು 43,338.39 ಹೆಕ್ಟೇರ್ ಬೆಳೆಗಳು ಜಲಾವೃತಗೊಂಡಿದೆ. ಅಧಿಕಾರಿಗಳು 373 ಪರಿಹಾರ ಶಿಬಿರಗಳನ್ನು ತೆರೆದಿದ್ದು, ಸದ್ಯ ಅವು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡುತ್ತಿವೆ. ನಾಗಾಂವ್ ಜಿಲ್ಲೆಯ ಕಂಪುರದಲ್ಲಿ ಕೊಪಿಲಿ ನದಿಯು ಪ್ರವಾಹದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದ್ದರೆ, ಬ್ರಹ್ಮಪುತ್ರ, ಬೇಕಿ, ಮಾನಸ್, ಪಗ್ಲಾಡಿಯಾ, ಪುತಿಮರಿ ಮತ್ತು ಜಿಯಾ-ಭರಾಲಿ ನದಿಗಳು ಹಲವಾರು ಸ್ಥಳಗಳಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿವೆ. ಹಲವಾರು ಮನೆಗಳು ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿವೆ ಮತ್ತು ಬೆಳೆಗಳು ಸಹ ಸಂಪೂರ್ಣ ನಾಶವಾಗಿವೆ ಎಂದು ನಲ್ಬರಿಯಲ್ಲಿ ಮತ್ತೊಂದು ಪ್ರವಾಹ ಸಂತ್ರಸ್ತ ಕಮಲ್ ಬರ್ಮನ್ ಹೇಳಿದ್ದಾರೆ.
ರಾಜ್ಯದ ರಾಜಧಾನಿ ಗುವಾಹಟಿಯ ನಿವಾಸಿಗಳು ಪ್ರವಾಹದಿಂದ ಇನ್ನೂ ವಿಶ್ರಾಂತಿ ಪಡೆದಿಲ್ಲ. ಇದು ನಗರದ ಹಲವಾರು ರಸ್ತೆಗಳು ಮತ್ತು ಪ್ರಮುಖ ಪ್ರದೇಶಗಳನ್ನು ಮುಳುಗಿಸಿದೆ. ಶುಕ್ರವಾರವೂ ಅಸ್ಸಾಂನ ಅನೇಕ ಕಡೆ ಭೂಕುಸಿತ ಪ್ರಕರಣಗಳು ವರದಿಯಾಗಿವೆ. ಆದರೆ, ನಗರದಲ್ಲಿ ಭೂಕುಸಿತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಸೇನೆಯ ಒಟ್ಟು ಒಂಬತ್ತು ಸಂಯೋಜಿತ ತಂಡಗಳು ಪ್ರವಾಹ ಪೀಡಿತ ಜಿಲ್ಲೆಗಳಾದ ಬಕ್ಸಾ, ನಲ್ಬರಿ, ಬಜಾಲಿ, ದರ್ರಾಂಗ್, ತಮುಲ್‌ಪುರ್, ಹೊಜೈ ಮತ್ತು ಕಮ್ರೂಪ್‌ನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಸ್ಸಾಂನಲ್ಲಿ ಪ್ರವಾಹದಿಂದ ಜನರಿಗೆ ಶೀಘ್ರ ವಿರಾಮವಿಲ್ಲ ಎಂಬುದು ಗೋಚರಿಸಿತ್ತಿದೆ.