ಹೆಲ್ಮೆಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ

ನವದೆಹಲಿ, ನ. 28: ಭಾರತದಲ್ಲಿ 2021ರ ಜೂನ್ ನಿಂದ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ಯೇತರ ಹೆಲ್ಮೆಟ್‌ಗಳನ್ನು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬೈಕ್ ಸವಾರರು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಧರಿಸದೇ ಇದ್ದರೆ ಇದು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿನ ಬಹುತೇಕ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಲು ಹೆಲ್ಮೆಟ್ ಧರಿಸದೇ ಇರುವುದು ಮತ್ತು ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಿರುವುದು ಮುಖ್ಯ ಕಾರಣವಾಗಿದೆ ಎಂದು ವರದಿ ಹೇಳಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಸ್ತೆ ಸುರಕ್ಷತಾ ಸಮಿತಿ ಭಾರತದ ಹವಾಮಾನಕ್ಕನುಗುಣವಾಗಿ ಕಡಿಮೆ ಭಾರದ ಹೆಲ್ಮೆಟ್ ಅನ್ನು ಪರಿಗಣಿಸುವಂತೆ ಸೂಚಿಸಿದ್ದು, ಅದರಂತೆ ನೀಡಿರುವ ವರದಿಗೆ ಸಾರಿಗೆ ಸಚಿವಾಲಯ ಒಪ್ಪಿಗೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಜೂನ್ ನಿಂದ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಅನ್ನು ಧರಿಸಬೇಕಾಗಿದೆ. ಅಲ್ಲದೇ ಬಿಐಎಸ್ ಪ್ರಮಾಣಿಕೃತ ಹೆಲ್ಮೆಟ್ ಅನ್ನು ಮಾರಾಟ ಮಾಡಬೇಕಾಗಿದೆ. ಇದರಿಂದ ದೇಶದಲ್ಲಿ ಕಡಿಮೆ ಗುಣಮಟ್ಟದ ಹೆಲ್ಮೆಟ್ ಮಾರಾಟಕ್ಕೆ ಕಡಿವಾಣ ಬೀಳಲು ನೆರವಾಗಲಿದೆ ಎಂದು ವರದಿ ತಿಳಿಸಿದೆ.

Exit mobile version