ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ

ಬೆಂಗಳೂರು,ಜೂ.17: ಮಹತ್ವದ ಬೆಳವಣಿಗೆಯೊಂದರಲ್ಲಿ 2020-21ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ ನೀಡಿದೆ.

ಈ ಬಗ್ಗೆ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ರಿಪೀಟರ್ಸ್ ಗೆ ಪರೀಕ್ಷೆ ನಡೆಸುವ ಬಗ್ಗೆ ಆಕ್ಷೇಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವರದಿ ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಸೂಚನೆ ನೀಡಿತ್ತು. ತಜ್ಞರ ಸಮಿತಿ ರಚಿಸಿರುವುದಾಗಿ ಸರ್ಕಾರ ಹೇಳಿದೆ.

5.92 ಲಕ್ಷ ಪಿಯು ವಿದ್ಯಾರ್ಥಿಗಳ ಫಲಿತಾಂಶ ಮತ್ತು 76 ಸಾವಿರ ರಿಪೀಟರ್ಸ್ ಗಳ ಫಲಿತಾಂಶದ ಬಗ್ಗೆ ತಜ್ಞರ ಸಮಿತಿ ಸಲಹೆ ಆಧರಿಸಿ ಸರ್ಕಾರ ತೀರ್ಮಾನಿಸಲಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಸರ್ಕಾರ ಹೇಳಿದೆ.

ಈ ತೀರ್ಮಾನದವರೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಪುನರಾವರ್ತಿತರು, ಸಾಮಾನ್ಯ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡುವುದು ಸರಿಯಲ್ಲ. ಖಾಸಗಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಅನಿವಾರ್ಯ ಎಂದು ನ್ಯಾ. ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಹೇಳಿದ್ದು, ಅರ್ಜಿಯ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಲಾಗಿದೆ.

Exit mobile version