ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಸದಸ್ಯ ಪೀಠವು ಹಿಜಾಬ್ ವಿಚಾರಣೆ ಇಂದು ನಡೆಸಲಿದೆ.

ರಾಜ್ಯದಾದ್ಯಂತ ಹಿಜಾಬ್ ಮತ್ತು ಸಮವಸ್ತ್ರದ ಕುರಿತು ಕೋಲಾಹಲವೇ ಸೃಷ್ಟಿಯಾಗಿದ್ದು, ಸರ್ಕಾರವು ಕೂಡ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ 3 ದಿನ ರಜೆ ಘೋಷಿಸಿದೆ. ಈ ಸಂದರ್ಭದಲ್ಲಿ ಹಿಜಾಬ್ ಮತ್ತು ಸಮವಸ್ತ್ರದ ಪ್ರಕರಣವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ನಿನ್ನೆಯಿಂದ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಹಿಜಾಬ್ ಪರ ವಕೀಲರಾದ ದೇವದತ್ತ ಕಾಮತ್ ತಮ್ಮ ಕಡೆಯ ವಾದವನ್ನು ಮಂಡಿಸಿದರು.

ಸರ್ಕಾರದ ಪರ ವಕೀಲ ಜನರಲ್ ತಮ್ಮ ಕಡೆಯ ವಾದ ಮಂಡಿಸಿದ್ದರು, ಎರಡು ಕಡೆಯ ವಾದ-ಪ್ರತಿವಾದವನ್ನು ಗಮನಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಈ ಎಲ್ಲಾ ವಿಚಾರಗಳಲ್ಲಿ ಕೆಲವು ಸಂವಿಧಾನಿಕ ಪ್ರಶ್ನೆಗಳು ಇರುವುದರಿಂದ ಮತ್ತು ವೈಯಕ್ತಿಕ ಅಂಶಗಳನ್ನು ಗಮನಿಸಿಲಾಗಿದೆ ಎಂದು ಏಕ ಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಹಿಜಾಬ್ ಪರ ವಕೀಲರು ಪ್ರಕರಣ ವರ್ಗಾಯಿಸುವ ಮುನ್ನ ಮಧ್ಯಂತರ ಆದೇಶವನ್ನು ನೀಡಬೇಕಾಗಿ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಈ ಚರ್ಚೆಯಲ್ಲಿ ಅತೀ ಪ್ರಾಮುಖ್ಯವುಳ್ಳ ಪ್ರಶ್ನೆಗಳು ಇರುವುದರಿಂದ ಮಧ್ಯಂತರ ಆದೇಶವನ್ನು ಮುಖ್ಯನ್ಯಾಯಮೂರ್ತಿಯವರು ವಿಸ್ತೃತ ಪೀಠವು ಪರಿಗಣಿಸುವುದು ಎಂದು ಸೂಚಿಸಿ ವರ್ಗಾಯಿಸಿದ್ದಾರೆ.

ಪ್ರಸ್ತುತ ಈ ಪ್ರಕರಣ ಮುಖ್ಯನ್ಯಾಯಮೂರ್ತಿವರಿಗೆ ವರ್ಗಾವಣೆಯಾಗಿದ್ದು ಮುಖ್ಯ ನ್ಯಾಯಮೂರ್ತಿಯವರು ಸಂವಿಧಾನಿಕ ಪೀಠವನ್ನು ರಚಿಸಬಹುದು ಎಂಬ ಶಂಕೆ ಇತ್ತು. ಸದ್ಯ ಈಗ ಅದಕ್ಕೆ ಉತ್ತರ ಲಭಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಸದಸ್ಯ ಪೀಠವು ಹಿಜಾಬ್ ವಿಚಾರಣೆಯನ್ನು ಇಂದು ನಡೆಸಲಿದೆ. ನಿನ್ನೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕ ಸದಸ್ಯ ಪೀಠವು ಸಾಂವಿಧಾನಿಕ ಹಕ್ಕುಗಳು ಮತ್ತು ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಗಮನಿಸಿ ವಿಸ್ತೃತ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಇಂದು ಮಧ್ಯಾಹ್ನ 2.30 ಕ್ಕೆ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ. ಒಟ್ಟಾರೆ ಇಂದು ತೀರ್ಪು ಪ್ರಕಟವಾಗಲಿದೆಯೋ? ಅಥವಾ ಮುಂದುಡುತ್ತದೆಯೊ? ಕಾದು ನೋಡಬೇಕಿದೆ.

Source : ನವೀನ್ ಶಿವಮೊಗ್ಗ

Exit mobile version