‘ನಮ್ಮ ದೇಶ ಎತ್ತ ಸಾಗುತ್ತಿದೆ?’ ಹಿಜಾಬ್ ವಿದ್ಯಾರ್ಥಿನಿ ಆಲಿಯಾ ಪ್ರಶ್ನೆ!

ನಿನ್ನೆ ಹಾಲ್‍ಟಿಕೆಟ್(Hallticket) ಪಡೆದುಕೊಂಡು ಹಿಜಾಬ್(Hijab) ಧರಿಸಿಯೇ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿನಿ(Student) ಆಲಿಯಾ ಅಸಾದಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಆಲಿಯಾ, ‘ನಮ್ಮ ದೇಶ ಎತ್ತ ಸಾಗುತ್ತಿದೆ.?’ ಎಂದು ಪ್ರಶ್ನೆ ಮಾಡಿದ್ದಾಳೆ. ನಿನ್ನೆ ಆಲಿಯಾ ಅಸಾದಿ ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ನನಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಪರೀಕ್ಷಾ ಕೇಂದ್ರದಲ್ಲಿ ಹೈಡ್ರಾಮಾ ಸೃಷ್ಟಿಸಿದ್ದಳು. ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಆಗಮಿಸಿ ಹೈಕೋರ್ಟ್ ಆದೇಶದನ್ವಯ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿ ಪರೀಕ್ಷಾ ಕೇಂದ್ರದಿಂದ ಹೊರಹಾಕಿದ್ದರು. ಆದರೆ ಇದೀಗ ಆಲಿಯಾ ಅಸಾದಿ ಉಡುಪಿ ಶಾಸಕ ರಘುಪತಿ ಭಟ್ ವಿರುದ್ದವೂ ಟ್ವೀಟ್‍ರ್‍ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾಳೆ.

ಪರೀಕ್ಷಾ ಕೇಂದ್ರದಲ್ಲಿ ನನಗೆ ಮತ್ತು ರೇಶಂಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ನಾವು ಮತ್ತೇ ಮತ್ತೇ ನಿರಾಸೆಯಾಗುತ್ತಿದ್ದೇವೆ. ನಾವು ನಮ್ಮ ಹಕ್ಕು ಕೇಳಿದ್ರೆ ಶಾಸಕ ರಘುಪತಿ ಭಟ್ ನ್ಯಾಯಾಂಗ ನಿಂದನೆ ಮತ್ತು ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಇಲ್ಲಿ ಯಾವ ಅಪರಾಧ ನಡೆದಿದೆ ಎಂದು ಕ್ರಿಮಿನಲ್ ಕೇಸ್ ಹಾಕ್ತಾರೆ? ಈ ದೇಶ ಎತ್ತ ಸಾಗುತ್ತಿದೆ? ಎಂದು ಟ್ವೀಟ್ ಮಾಡಿ ಶಾಸಕ ರಘುಪತಿ ಭಟ್ ವಿರುದ್ದ ಕಿಡಿಕಾರಿದ್ದಾರೆ.

ಇನ್ನು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದಲ್ಲಿ ಸೃಷ್ಟಿಸಿದ ಹೈಡ್ರಾಮಾ ಕುರಿತು ಮಾತನಾಡಿರುವ ಶಾಸಕ ರಘುಪತಿ ಭಟ್, ಈ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದಲ್ಲಿ ಇದೇ ರೀತಿಯಲ್ಲಿ ಡ್ರಾಮಾ ಮಾಡಿದ್ರೆ ಕ್ರಿಮಿನಲ್ ಕೇಸ್ ಹಾಕಿ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಇವರನ್ನು ಇನ್ನು ಮುಂದೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಾವು ಪರೀಕ್ಷೆ ಬರೆಯುತ್ತೇವೆ ಎಂದು ಹಿಜಾಬ್ ತೆಗೆದು ಹಾಲ್‍ಟಿಕೆಟ್ ಪಡೆದಿದ್ದಾರೆ. ಆದರೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೈಡ್ರಾಮಾ ಮಾಡ್ತಾರೆ.

ಈ ರೀತಿಯ ಘಟನೆಗಳನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ವಿದ್ಯಾರ್ಥಿನಿಯರು ಇದೇ ರೀತಿ ಮಾಡಿದ್ರೆ ಪೋಲಿಸ್ ಮತ್ತು ಜಿಲ್ಲಾಡಳಿತಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹ ಮಾಡಿದ್ದೇನೆ ಎಂದು ಹೇಳಿದ್ದಾರೆ.

Exit mobile version