Bengaluru: ನಿಮ್ಮ ವಾಹನ 2019ರ ಏಪ್ರಿಲ್ (April) 1ಕ್ಕಿಂತಾ ಹಳೆಯದಾಗಿದ್ದರೆ ನೀವು ನಂಬರ್ ಪ್ಲೇಟ್ ಬದಲಿಸುವುದು ಕಡ್ಡಾಯ ಎಂದು ಸರ್ಕಾರ ನಿಯಮ ಜಾರಿ ಮಾಡಿರುವ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಏರಿಕೆ ಕಾಣುತ್ತಿದೆ. ಮೊದಲನೇ ತಿಂಗಳಿಗೆ ಹೋಲಿಸಿದರೆ ಎರಡನೇ ತಿಂಗಳಲ್ಲಿ 34 ಲಕ್ಷ ವಾಹನ ಮಾಲೀಕರು ಎಚ್ಎಸ್ಆರ್ಪಿ ಅಳವಡಿಕೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೊಸ ನಂಬರ್ ಪ್ಲೇಟ್ (Number Plate) ಬಳಸಲು ಆಸಕ್ತಿ ತೋರಿದ್ದಾರೆ.
ದೇಶಾದ್ಯಂತ ಏಕೀಕೃತ ವಾಹನ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ ಸಾರಿಗೆ ಇಲಾಖೆ 2019ರ ಏಪ್ರಿಲ್ಗಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆ ಕಡ್ಡಾಯಗೊಳಿಸಿತ್ತು ಅದರಂತೆ ರಾಜ್ಯದಲ್ಲಿ 2019ರ ಏಪ್ರಿಲ್ಗಿಂತ ಹಿಂದೆ ನೋಂದಣಿಯಾದ 2 ಕೋಟಿಗೂ ಹೆಚ್ಚಿನ ವಾಹನಗಳು ಎಚ್ಎಸ್ಆರ್ಪಿ ಅಳವಡಿಕೆ ಮಾಡಿಕೊಳ್ಳಬೇಕಿದೆ. ಆರಂಭದಲ್ಲಿ ಎಚ್ಎಸ್ಆರ್ಪಿ ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿದ್ದ ಕಾರಣಕ್ಕಾಗಿ ಈಗಾಗಲೇ ಎರಡು ಬಾರಿ ಗಡವು ವಿಸ್ತರಿಸಲಾಗಿದೆ.
ಅದರಂತೆ ಎರಡನೇ ಬಾರಿ ಗಡುವು ವಿಸ್ತರಿಸಿದ ನಂತರದಿಂದ ಎಚ್ಎಸ್ಆರ್ಪಿ (HSRP) ಅಳವಡಿಕೆ ಮಾಡಿಕೊಳ್ಳುವವರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈವರೆಗೆ ಶೇ. 25ರಷ್ಟು ವಾಹನಗಳು ಎಚ್ಎಸ್ಆರ್ಪಿ ಅಳವಡಿಕೆ ಮಾಡಿಕೊಂಡಿವೆ. ಆದರೆ ಇನ್ನೂ ಶೇ.75ರಷ್ಟು ಜನ ಬದಲಾವಣೆ ಮಾಡಿಸಲು ನಿರಾಸಕ್ತಿ ತೋರಿದ್ದಾರೆ.
ಒಂದು ವೇಳೆ ನಮ್ಮ ವಾಹನ ಕಳ್ಳತನವಾದ್ರೆ ನಾವು ಕೂಡಲೇ ಪೊಲೀಸರಿಗೆ ದೂರು ಕೊಡ್ತೇವೆ. ಆಗ ಪೊಲೀಸರು ಆರ್ಟಿಒ (RTO) ನೆರವಿನಿಂದ ಮಾಹಿತಿ ಸಂಗ್ರಹ ಮಾಡ್ತಾರೆ. ಒಂದು ವೇಳೆ ನಮ್ಮ ವಾಹನಕ್ಕೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇದ್ದರೆ, ಅದರ ಮಾಹಿತಿ ವಾಹನ್ ತಂತ್ರಾಂಶದಲ್ಲಿ ಇರುತ್ತೆ. ಈ ವೇಳೆ ಅಧಿಕೃತ ಅಲ್ಲದ ವಾಹನ ರಸ್ತೆಯಲ್ಲಿ ಓಡಾಡ್ತಿದ್ರೆ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.ಇನ್ನು ನೀವು ನಿಮ್ಮ ಹಳೆಯ ವಾಹನಕ್ಕೂ ಆದಷ್ಟು ಬೇಗ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಬೇಕಿದೆ.
ಎಚ್ಎಸ್ಆರ್ಪಿ ಅಳವಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಲಾಗಿದೆ. ಈ ಹಿಂದೆ 2023ರ ನ.17ರೊಳಗೆ ಎಚ್ಎಸ್ಆರ್ಪಿ ಅಳವಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಕೇವಲ 30 ಸಾವಿರ ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಹೀಗಾಗಿ ಗಡುವನ್ನು ಫೆ.17ಕ್ಕೆ ವಿಸ್ತರಿಸಲಾಯಿತು. ಆದರೆ, ಆ ಸಂದರ್ಭದಲ್ಲೂ 18 ಲಕ್ಷ ವಾಹನಗಳು ಮಾತ್ರ ಎಚ್ಎಸ್ಆರ್ಪಿ ಅಳವಡಿಕೆಗೆ ಒಲವು ತೋರಿದ್ದರು.
ಇದೀಗ 52 ಲಕ್ಷ ಜನ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ ಹೀಗಾಗಿ ಮತ್ತೊಮ್ಮೆ ಗಡುವು ವಿಸ್ತರಿಸಿ ಮೇ (May) 31ರೊಳಗೆ ಎಲ್ಲರೂ ಎಚ್ಎಸ್ಆರ್ಪಿ ಅಳವಡಿಕೆ ಮಾಡಿಕೊಳ್ಳಿ ಇಲ್ಲವಾದರೆ ಜೂನ್ 1ರಿಂದ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಸೂಚಿಸಿದೆ.