ನಾಳೆ ಕೇರಳ ಪ್ರವೇಶಿಸಲಿದೆ ತೌಕ್ತೆ ಚಂಡಮಾರುತ: ಕರ್ನಾಟಕದಲ್ಲಿ ಮೇ ೧೬ರಂದು ಭಾರಿ ಮಳೆ ನಿರೀಕ್ಷೆ

ಬೆಂಗಳೂರು, ಮೇ. 14: ದೇಶದ ಈ ವರ್ಷದ ಮೊದಲ ಚಂಡಮಾರುತ ನಾಳೆ ಅಬ್ಬರಿಸಲಿದ್ದು, ಕೇರಳವನ್ನು ಪ್ರವೇಶಿಸಲಿದೆ. ಈ ಚಂಡಮಾರುತಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಡಲಾಗಿದೆ. ನಾಳೆಯಿಂದ 2 ದಿನಗಳ ಕಾಲ ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ. ನಾಳೆ ಕೇರಳಕ್ಕೆ ಪ್ರವೇಶಿಸಲಿರುವ ತೌಕ್ತೆ ಚಂಡಮಾರುತ ಮೇ 16ರಂದು ಕರ್ನಾಟಕದಲ್ಲಿ ಅಬ್ಬರಿಸಲಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂ, ಕಾಸರಗೋಡು, ಕಣ್ಣೂರು, ವಯನಾಡ್, ಕೋಳಿಕೋಡ್, ಮಲಪ್ಪುರಂ, ಕೊಲ್ಲಂ, ಪಥನಾಂತಿಟ್ಟ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೇ 17ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು, ನಾಳೆ ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕರ್ನಾಟಕ ಮಾತ್ರವಲ್ಲದೆ ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಇಂದು ಮಳೆ ಹೆಚ್ಚಾಗಲಿದೆ. ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದ 8 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಿಸಿದ್ದು, ಕೇರಳ ಸರ್ಕಾರದಿಂದ ಕಂಟ್ರೋಲ್ ರೂಂ ಅನ್ನು ಕೂಡ ತೆರೆಯಲಾಗಿದೆ.

Exit mobile version