ತೌಕ್ತೆ ಚಂಡಮಾರುತದ ಎಫೆಕ್ಟ್: ಕರ್ನಾಟಕದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ

ಬೆಂಗಳೂರು, ಮೇ. 17: ಮಹಾಮಾರಿ ಕೊರೊನಾ ಆತಂಕದ ನಡುವೆಯೇ ರಾಜ್ಯಕ್ಕೆ ಅಪ್ಪಳಿಸಿರುವ ತೌಕ್ತೆ ಅಬ್ಬರಕ್ಕೆ ಕರ್ನಾಟಕ ತತ್ತರಿಸಿ ಹೋಗಿದ್ದು, ರಾಜ್ಯದ ಕರಾವಳಿ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ರಾಜ್ಯಕ್ಕೆ ಅಪ್ಪಳಿಸಿರುವ ಭೀಕರ ಚಂಡಮಾರುತದ ಹೊಡೆತಕ್ಕೆ ಕರ್ನಾಟಕದ ಕರಾವಳಿ ಪ್ರದೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ ದಿನವಿಡಿ ಸುರಿದ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ.‌ ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಶನಿವಾರ ಇಡೀ ರಾತ್ರಿ ಸುರಿದ ಮಳೆಗೆ ರಾಜಧಾನಿ ಬೆಂಗಳೂರು, ಮೈಸೂರು, ಕೊಡಗು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಸಹ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಪ್ರಮುಖವಾಗಿ ಮಂಗಳೂರು, ‌ಉಡುಪಿ ಸೇರಿದಂತೆ ಕರಾವಳಿ ಭಾಗದ ಹಲವು ‌ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತದ ಹೊಡೆತ ಜೋರಾಗಿದೆ. ಚಂಡಮಾರುತದ ಅಬ್ಬರಕ್ಕೆ ಸಮುದ್ರ ತೀರದಲ್ಲಿ ಭಾರೀ ಪ್ರಮಾಣದ ಅಲೆಗಳು ‌ಸೃಷ್ಟಿಯಾದ ಪರಿಣಾಮ ಸಮುದ್ರ ಹಲವು ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದೆ. ಈ ನಡುವೆ ಉಡುಪಿ ಜಿಲ್ಲೆಯ ಪಡುಬಿದ್ರೆಗೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ತೌಕ್ತೆ ಅಬ್ಬರದಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು.

ಎಡಬಿಡದೆ ಸುರಿದ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡರೆ, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ತೊಂದರೆ ಎದುರಾಗಿದೆ. ರಾಜ್ಯದಲ್ಲಿ ಈಗಾಗಲೇ ದೊಡ್ಡ ಆಘಾತ ಸೃಷ್ಟಿಸಿರುವ ಕೊರೊನಾ ಸಂಕಷ್ಟದ ನಡುವೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತ, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸೂಕ್ತ ಕ್ರಮಕ್ಕೆ ಆಗ್ರಹ:
ರಾಜ್ಯಕ್ಕೆ ‌ಅಪ್ಪಳಿಸಿರುವ ತೌಕ್ತೆ ಚಂಡಮಾರುತದಿಂದ ತತ್ತರಿಸಿರುವ ಜನರಿಗೆ ನೆರವಾಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ತೌಕ್ತೆ ಚಂಡಮಾರುತ ಕರಾವಳಿ ಪ್ರದೇಶಗಳಲ್ಲಿ ತೀವ್ರವಾಗಿ ಅಪ್ಪಳಿಸಿದ್ದು, ದೊಡ್ಡಮಟ್ಟದ ಆಘಾತವನ್ನುಂಟು ಮಾಡಿದೆ. ಹೀಗಾಗಿ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಜನರಿಗೆ
ಅಗತ್ಯವಿರುವ ಎಲ್ಲ ವಿಪತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಅವರ ನೆರವಿಗೆ ‌ಧಾವಿಸಬೇಕೆಂದು ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Exit mobile version