ನಾನು ಇರೋವರೆಗೂ ಜಿಟಿಡಿ ಅನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಲ್ಲ: ಎಚ್.ಡಿ. ಕುಮಾರಸ್ವಾಮಿ

ಮೈಸೂರು, ಫೆ. 03: ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾನು ರಾಜಕೀಯದಲ್ಲಿ ಇರುವವರೆಗೂ ಅವರನ್ನು ಮತ್ತೆ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳಲ್ಲಾ ಎಂದಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಟಿಡಿ ಅವರು ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವರ ಮನೆಗಳಿಗೆ ಹೋಗ್ತಾರೆ. ಎಲ್ಲರ ವಿಶ್ವಾಸಗಳಿಸೋಕೆ ಓಡಾಡ್ತಿದ್ದಾರೆ. ಎಲ್ಲೂ ಗಿಟ್ಟಲ್ಲ ಅಂದ್ರೆ ಕೊನೆಗೆ ನಮ್ಮತ್ರನೆ ಬರ್ತಾರೆ‌ ಅಂತಾನೂ‌ ಗೊತ್ತು. ಹೀಗಾಗಿ, ಒಂದು ವೇಳೆ ಜಿ.ಟಿ. ದೇವೇಗೌಡ ಅವರು ಬೇರೆ ಪಕ್ಷಕ್ಕೆ ಹೋಗಿ ಮತ್ತೆ ಜೆಡಿಎಸ್‌ಗೆ ವಾಪಸ್‌ ಬಂದ್ರೆ ಖಂಡಿತವಾಗಿ ಸ್ವೀಕರಿಸುವುದಿಲ್ಲ. ನಾನು ಇರೋವರೆಗೂ ಅವರನ್ನ ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ‌ ಎಂದು ಖಾರವಾಗಿ ನುಡಿದರು.

ನನ್ನ ಕೆಲವು ನಾಯಕರು ಕೇಳಿದ್ರು ಅವರಿಗೆ ಸ್ವಲ್ಪ ಸಮಯ ಕೊಡಿ ಅಂತ. ಅದಕ್ಕೆ ಸಮಯ ಕೊಟ್ಟಾಗಿದ್ದೆ. ಆದ್ರೆ ಇನ್ನು ಸಮಯ ಕೊಡೋಕೆ ಆಗೋಲ್ಲ. ಇನ್ನು ಇವರ ಆಟ ನಡೆಯೋಲ್ಲ. ಮೈಸೂರಿನ ಜಲದರ್ಶಿನಿಯಲ್ಲಿ ಸಾ.ರಾ.ಮಹೇಶ್ ಭೇಟಿ ಮಾಡಿದ್ದಾಗಲು ಇದೆ ಹೇಳಿದ್ರು. ಸಾ.ರಾ.ಮಹೇಶ್ ಸಹ ಅವರನ್ನ‌ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಆದ್ರೆ ಇವರು ಒಳಗೊಂದು ಮಾತನಾಡಿ ಹೊರಗೆ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿದ್ದಾರೆ. ಈಗ ಆಗಿರುವ ಡ್ಯಾಮೇಜ್ ಸಾಕು ಮತ್ತೆ ಇವರಿಗೆ ಟೈಂ ಕೊಡೋಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಇದೇ ವೇಳೆ‌ “ಜೆಡಿಎಸ್ ಒಂದು ಪೊಲಿಟಿಕಲ್ ಪಾರ್ಟಿನೇ ಅಲ್ಲ” ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಪೊಲಿಟಿಕಲ್ ಪಾರ್ಟಿ ಅಲ್ಲದ ಮೇಲೆ ಪದೇ ಪದೇ ಜೆಡಿಎಸ್ ಬಗ್ಗೆ ಯಾಕೆ ಮಾತನಾಡುತ್ತಾರೆ. ಮಾತನಾಡುವ ಅವಶ್ಯಕತೆಯೇ ಇಲ್ಲವಲ್ಲ. ಸಿದ್ದರಾಮಯ್ಯಗೆ ಅವರ ಪಕ್ಷಕ್ಕಿಂತ ಜೆಡಿಎಸ್ ಬಗ್ಗೆ ಮಾತನಾಡೋದೆ ಜಾಸ್ತಿ ಆಗಿದೆ. ನಮಗೆ ಐಡಿಯಾಲಾಜಿ ಇದೆ ಅವರಿಗೆ ಐಡಿಯಾಲಾಜಿ ಕೊರತೆ ಇದೆ. ಜೆಡಿಎಸ್ ನ ಶಕ್ತಿ ಏನು ಎಂದು ನಮ್ಮ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ತಿರುಗೇಟು ನೀಡಿದರು.

Exit mobile version