ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರನ್ನು ವಿಪಕ್ಷದಲ್ಲಿ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ: ಸಿದ್ದು ವಿರುದ್ಧ ಬಿಎಸ್​ವೈ ಗುಡುಗು

ಬೆಂಗಳೂರು, ಮಾ. 09: ”ಮುಂದಿನ ಬಾರಿಯೂ ಸಿದ್ದರಾಮಯ್ಯನವರನ್ನು ವಿಪಕ್ಷದಲ್ಲಿಯೇ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ” ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸವಾಲು ಎಸೆದಿದ್ದಾರೆ.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರಿಗೆ ಬಜೆಟ್‌ ಮಂಡನೆ ಮಾಡುವ ನೈತಿಕತೆಯಿಲ್ಲ ಎಂದು ಪ್ರತಿಭಟಿಸಿ ಸಭಾತ್ಯಾಗ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಬಿಎಸ್‌ವೈ ಅವರು, ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 135 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಆ ಮೂಲಕ ಮುಂದಿನ ಬಾರಿಯೂ ಸಿದ್ದರಾಮಯ್ಯನವರನ್ನು ವಿಪಕ್ಷದಲ್ಲಿಯೇ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಸವಾಲು ಹಾಕಿದರು.

ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಇಂತಹ ಸಂಕಷ್ಟದ ಸಂದರ್ಭದಲ್ಲೂ ಬಜೆಟ್ ಮಂಡನೆ ಮಾಡಿದ್ದೇನೆ. ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕದೆ ಹೊರೆಯಾಗದ ಬಜೆಟ್ ಮಂಡನೆ ಮಾಡಿದ್ದು ಇತಿಹಾಸದಲ್ಲೇ ಇದು ಮೊದಲು” ಎಂದು ಸಮರ್ಥಿಸಿಕೊಂಡಿದ್ದು, ”ಕಾಂಗ್ರೆಸ್‌ನವರ ನೈತಿಕತೆ ಅವರ ತಲೆ, ನಾಳೆ ಅವರ ನೈತಿಕತೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತೇನೆ” ಎಂದು ಹೇಳಿದರು.

”ಕಳೆದ ವರ್ಷದ ಆಯವ್ಯಯದ ಗಾತ್ರಕ್ಕಿಂತಲೂ 8,314 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವುದರೊಂದಿಗೆ ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ತುಸು ಸುಧಾರಿಸಿದ್ದರಿಂದ ಈ ರೀತಿಯ ಬಜೆಟ್ ಮಂಡನೆ ಸಾಧ್ಯವಾಗಿದೆ” ಎಂದು ಅಭಿಪ್ರಾಯಿಸಿದರು.

Exit mobile version