ಬ್ಲ್ಯಾಕ್‌ ಫಂಗಸ್‌ ಕಣ್ಣಿಗೆ ಹೋದರೆ, ಕಣ್ಣನ್ನೇ ತೆಗೀಬೇಕು: ಸಚಿವ ಡಾ. ಕೆ.ಸುಧಾಕರ್‌

ಬೆಂಗಳೂರು, ಜೂ. 01: ಬ್ಲ್ಯಾಕ್‌ ಫಂಗಸ್‌ ಕಣ್ಣಿನ ತನಕ ಹೋದರೆ, ಕಣ್ಣನ್ನು ತೆಗೆಯಲೇಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದರು.

ಬ್ಲ್ಯಾಕ್‌ ಫಂಗಸ್‌ ಬಗ್ಗೆ ಎಚ್ಚರಿಕೆ ಅಗತ್ಯ. ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೊದಲು ಡೆಂಟಲ್ ಪರೀಕ್ಷೆ‌ ಮಾಡುತ್ತಾರೆ. ನಂತರ ಕಣ್ಣಿನ ತಜ್ಞರು ಸೇರಿಕೊಂಡು ಪರೀಕ್ಷೆ ಮಾಡುತ್ತಾರೆ ಎಂದು ತಿಳಿಸಿದರು.

ಕೋವಿಡ್‌ ಲಸಿಕೆ ಕುರಿತು ಮಾತನಾಡಿ, ಒಂದು ಲಕ್ಷ ೮೬ ಸಾವಿರ ಡೋಸ್ ಕೋವ್ಯಾಕ್ಸಿನ್ ಬಂದಿದೆ. ರಾಜ್ಯದಲ್ಲಿ ಮೂರು ಲಕ್ಷ ಜನರಿಗೆ ಕೊಡಬೇಕು. ಎರಡನೇ ಡೋಸ್ ತೆಗೆದುಕೊಳ್ಳಲು ಸಹಾಯ ಆಗುತ್ತಿದೆ ಎಂದರು.

ರಾಜ್ಯದಲ್ಲಿ ಮಕ್ಕಳ ತಜ್ಞರ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲೇ ಅತೀ ಹೆಚ್ಚು ವೈದ್ಯರಿದ್ದಾರೆ. ಮೂರನೇ ಅಲೆಗೂ ಸಿದ್ಧವಾಗಿದ್ದೇವೆ. ಆದರೆ, ಸಾಂಕ್ರಾಮಿಕ ರೋಗಕ್ಕೆ ಬೇಕಾಗುವಷ್ಟು ಸೌಲಭ್ಯ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಲಾಕ್‌ಡೌನ್ ವಿಸ್ತರಣೆ ಸಂಬಂಧಿಸಿದಂತೆ ತಜ್ಞರು ಈಗಾಗಲೇ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದಾರೆ. ಶೇ. 5 ರಷ್ಟು ಪಾಸಿಟಿವ್ ಕೇಸ್ ಕೆಳಗಡೆ ಬರಬೇಕು. ಆಗ ಲಾಕ್‌ಡೌನ್ ರಿಲ್ಯಾಕ್ಸ್ ಮಾಡಬಹುದು. ಈಗ ಲಾಕ್‌ಡೌನ್ ನಿರ್ಬಂಧ ಮಾಡಲು ಸೂಚಿಸಿದ್ದಾರೆ.

ಹಂತ ಹಂತವಾಗಿ ಕಡಿಮೆ ಮಾಡಲು ಹೇಳಿದ್ದಾರೆ. ನಾವೂ ಅಭಿಪ್ರಾಯ ಕೊಡಬಹುದು. ಆ ಅಭಿಪ್ರಾಯದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದು. ಲಾಕ್‌ಡೌನ್ ಸ್ವರೂಪ ಹೇಗಿರಬೇಕು ಎಂದು ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ತಜ್ಞರ ಜೊತೆ ಚರ್ಚೆ ಮಾಡುತ್ತಾರೆ ಎಂದರು.

Exit mobile version