ಅಮೇರಿಕ(America) ಸೆನೆಟ್‍ನ ಕಾಂಗ್ರೆಸ್(Congress) ಸದಸ್ಯೆ ಇಲ್ಹಾನ್ ಓಮರ್(Illhan Omar) ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ಭೇಟಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ನಮ್ಮ ಸಾರ್ವಭೌಮತ್ವವನ್ನು ಗೌರವಿಸಬೇಕು, ಅದನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತೇವೆ ಎಂದು ಭಾರತ(India) ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

ಇನ್ನು ಅಮೇರಿಕಾದ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಓಮರ್ ಏಪ್ರಿಲ್ 20 ರಿಂದ 24ರವರೆಗೆ ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದ್ದಾರೆ. ಇಸ್ಲಾಮಾಬಾದ್ ಮತ್ತು ಲಾಹೋರ್‍ನಲ್ಲಿ ಅನೇಕ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಿದ್ದು, ತದನಂತರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಭೇಟಿಗೂ ಮುನ್ನ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಹಾಲಿ ಪ್ರಧಾನಿ ಶೆಹಬಾಜ್ ಶರೀಫ್ ಜೊತೆ ಇಲ್ಹಾನ್ ಓಮರ್ ಸಭೆ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದ ವಿಷಯದ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಇಲ್ಹಾನ್ ಓಮರ್ ಅವರ ಪಾಕ್ ಆಕ್ರಮಿತ ಕಾಶ್ಮೀರ ಭೇಟಿಯ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತ, “ಅಮೇರಿಕಾ ಕಾಂಗ್ರೆಸ್ ಸದಸ್ಯೆಯ ಪಾಕ್ ಆಕ್ರಮಿತ ಕಾಶ್ಮೀರ ಭೇಟಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾತ್ರ ರಾಜಕೀಯ ಮಾಡಬಹುದು. ಆದರೆ ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುವುದು ಖಂಡನೀಯ.” ಎಂದು ಹೇಳಿದೆ.
ಇನ್ನು ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಅಮೇರಿಕಾ ತಲೆ ಹಾಕುತ್ತಿದೆ. ತನ್ನನ್ನು ಪ್ರಧಾನಿ ಸ್ಥಾನನಿಂದ ಕೆಳಗಿಳಿಸುವಲ್ಲಿ ಅಮೇರಿಕಾದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಮೇರಿಕಾದ ಮೇಲೆ ಗಂಭೀರ ಆರೋಪವನ್ನು ಮಾಡಿದ್ದರು. ವಿದೇಶಿ ಶಕ್ತಿಯೂ ಪಾಕಿಸ್ತಾನದ ಆಂತರಿಕ ವಿಚಾರಗಳನ್ನು ನಿಯಂತ್ರಿಸುತ್ತಿದೆ.

ಆ ಮೂಲಕ ನಮ್ಮ ಸಮಗ್ರತೆಯನ್ನು ತುಚ್ಚವಾಗಿ ಕಾಣುತ್ತಿದೆ ಎಂದು ಟೀಕಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಅಮೇರಿಕಾ ಕಾಂಗ್ರೆಸ್ ಸದಸ್ಯೆಯ ಪಾಕಿಸ್ತಾನ ಭೇಟಿ ಅನೇಕ ಚರ್ಚೆಗಳಿಗೆ ಕಾರಣವಾಗಿದೆ.