ದೇಶದ 50 ನಗರಗಳಲ್ಲಿ ‘ಸ್ಪುಟ್ನಿಕ್‌–ವಿ’ ಲಸಿಕಾ ಕಾರ್ಯಕ್ರಮ

ಹೈದರಾಬಾದ್, ಜು. 13: ಹೈದರಾಬಾದ್‌ನಲ್ಲಿ ಮೇ 14ರಂದು ಆರಂಭಗೊಂಡ ‘ಸ್ಪುಟ್ನಿಕ್‌–ವಿ’ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಯನ್ನು ದೇಶದ 50 ನಗರಗಳಲ್ಲಿ ವಿಸ್ತರಿಸಲಾಗಿದೆ ಎಂದು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್‌ ಹೇಳಿದೆ.

ಮುಂಬರುವ ವಾರಗಳಲ್ಲಿ ಸ್ಪುಟ್ನಿಕ್‌–ವಿ ಲಸಿಕೆಯ ವಾಣಿಜ್ಯ ವಹಿವಾಟನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಹೈದರಾಬಾದ್‌ನಲ್ಲಿ ಆರಂಭಗೊಂಡ ಸ್ಪುಟ್ನಿಕ್‌–ವಿ ಲಸಿಕಾ ಕಾರ್ಯಕ್ರಮವು ಇದೀಗ ದೇಶದ ಹಲವು ನಗರಗಳಿಗೆ ವಿಸ್ತರಿಸಿದೆ. ವಿಶಾಖಪಟ್ಟಣ, ಬೆಂಗಳೂರು, ಮುಂಬೈ, ನವೀ ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ, ವಿಜಯವಾಡ, ಬಡ್ಡಿ, ಕೊಲ್ಹಾಪುರ, ಕೊಚ್ಚಿ, ರಾಯಪುರ, ಚಂಡೀಗಡ, ಪುಣೆ, ನಾಗಪುರ, ನಾಸಿಕ್‌ ಸೇರಿದಂತೆ ಹಲವು ನಗರಗಳಲ್ಲಿ ಸ್ಪುಟ್ನಿಕ್‌ ವಿ ಲಸಿಕಾ ಕಾರ್ಯಕ್ರಮ ಚಾಲನೆಯಲ್ಲಿದೆೆ ಎಂದು ಸಂಸ್ಥೆ ತಿಳಿಸಿದೆ.

ಇತ್ತೀಚಿಗೆ ರಷ್ಯಾದಿಂದ ಸ್ಪುಟ್ನಿಕ್‌–ವಿ ಲಸಿಕೆಯ 30 ಲಕ್ಷ ಡೋಸ್‌ಗಳನ್ನು ರೆಡ್ಡೀಸ್ ಲ್ಯಾಬೊರೇಟರೀಸ್ ಪಡೆದಿದೆ. ಇದನ್ನು 12.5 ಕೋಟಿ ಜನರಿಗೆ ವಿತರಿಸಲಾಗುವುದು.ಇದಕ್ಕಾಗಿ ದೇಶದ ಪ್ರಮುಖ ಆಸ್ಪತ್ರೆಗಳೊಂದಿಗೆ ನಾವು ಕೈಜೋಡಿಸಿದ್ದೇವೆ ಎಂದು ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ.

Exit mobile version